ಬೆಂಗಳೂರು: ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ಶುಕ್ರವಾರ ತಡರಾತ್ರಿ ವಿಚಿತ್ರ ಅಪಘಾತವೊಂದು ನಡೆದಿದ್ದು, ಸುಮಾರು ನಾಲ್ಕು ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಸ್ವಿಪ್ಟ್ ಕಾರಿನಲ್ಲಿ ಸಿಲುಕಿದ್ದ ಇಬ್ಬರು ಖಾಸಗಿ ಕಂಪನಿಯ ಉದ್ಯೋಗಿಗಳನ್ನು ರಕ್ಷಿಸಲಾಗಿದೆ.
ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಶಿವಾನಂದ ಸರ್ಕಲ್ ನಲ್ಲಿ ವೇಗವಾಗಿ ಬಂದ ಕಲ್ಲುಗಳನ್ನು ತುಂಬಿದ್ದ ಟಿಪ್ಪರ್ ಲಾರಿಯೊಂದು ಸ್ವಿಪ್ಟ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಲಾರಿಯಡಿ ಸಿಲುಕಿಕೊಂಡಿತ್ತು. ಕಾರಿನಲ್ಲಿ ಸಿಲುಕಿದ್ದ ನಾಗರಾಜು ಹಾಗೂ ಕಾರಿನ ಚಾಲಕ ಗಣೇಶ್ ರನ್ನು ಕಾರಿನ ಟಾಪ್ ಮತ್ತು ಬಾಗಿಲುಗಳನ್ನು ಕಟ್ ಮಾಡಿ ರಕ್ಷಿಸಲಾಗಿದೆ. ಆದರೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯಡಿ ಸಿಕ್ಕಿ ಜಖಂಗೊಂಡಿದ್ದ ಕಾರಿನಲ್ಲಿ ಇಬ್ಬರು ಸಿಲುಕಿರುವುದನ್ನು ಗಮನಿಸಿದ ಸಾರ್ವಜನಿಕರು, ಹೈಗ್ರೌಂಡ್ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.