ರಾಜ್ಯ

ಅಶ್ವಥಿ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿ: ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ

Manjula VN

ಕಲಬುರ್ಗಿ: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಮೇಲೆ ನಡೆದಿದೆ ಎನ್ನಲಾಗಿರುವ ರ‍್ಯಾಗಿಂಗ್ ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಅಶ್ವಥಿಯವರ ವೈದ್ಯಕೀಯ ಪ್ರಮಾಣಪತ್ರವನ್ನು ಶೀಘ್ರಗತಿಯಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿದೆ.

ರ‍್ಯಾಗಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು ನೀಡುವುದಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಫೀರ್ ಅಹ್ಮದ್ ಅವರು ವಿರೋಧ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿಯರಿಗೆ ಒಂದು ವೇಳೆ ಜಾಮೀನು ಮಂಜೂರು ಮಾಡಿದ್ದೇ ಆದರೆ, ಸಂತ್ರಸ್ತ ವಿದ್ಯಾರ್ಥಿನಿಗೆ ಬೆದರಿಕೆ ಹಾಕುವ ಸಂಭವವಿರುತ್ತದೆ. ಇದರಿಂದ ವಿದ್ಯಾರ್ಥಿನಿ ತನ್ನ ಹೇಳಿಕೆ ನೀಡದೇ ಇರಬಹುದು ಅಥವಾ ತನಿಖೆಗೆ ಸಹಕರಿಸದೇ ಇರಬಹುದು ಎಂದು ಹೇಳಿದ್ದಾರೆ.

ಇದರಂತೆ ವಾದ ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯವು ವಿದ್ಯಾರ್ಥಿನಿಯರಿಗೆ ಜಾಮೀನನ್ನು ನಿರಾಕರಿಸಿದ್ದು, ಸಂತ್ರಸ್ತೆ ಅಶ್ವಥಿಯವರ ವೈದ್ಯಕೀಯ ಪ್ರಮಾಣಪತ್ರವನ್ನು ಮಂಗಳವಾರದೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ವಿಶೇಷ ತನಿಖಾಧಿಕಾರಿ ಎಸ್. ಜಾನ್ಹವಿಯವರಿಗೆ ಸೂಚನೆ ನೀಡಿದೆ.

ಪ್ರಕರಣ ಸಂಬಂಧ ಕಾಲೇಜು ಪ್ರಾಂಶುಪಾಲ ಹಾಗೂ ಪ್ರಧಾನ ಪ್ರಾಂಶುಪಾಲರು ಹೇಳಿಕೆ ನೀಡಿದ್ದು, ಹಾಸ್ಟೆಲ್ ನಲ್ಲಿ ಯಾವುದೇ ರೀತಿಯ ರ್ಯಾಗಿಂಗ್ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ಮಧ್ಯೆ ಅಶ್ವಥಿಯವರ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲು ಮಾಡಿಕೊಂಡಿದ್ದು, ಹೇಳಿಕೆಯನ್ನು ಆಧರಿಸಿದ ಕಾಲೇಜು ಹಾಗೂ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT