ಬೆಂಗಳೂರು: ರಾಜ್ಯ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನದ ಹಗರಣವಿಡಿದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಸೋಮವಾರದಿಂದ ಆರಂಭಗೊಂಡಿರುವ ಮುಂಗಾರು ಅಧಿವೇಶನ 9 ದಿನಗಳ ಕಾಲ ನಡೆಯಲಿದೆ. ನಿನ್ನೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಬಿಡಿಎ ಹಗರಣ ವಿಚಾರವನ್ನು ಪ್ರಸ್ತಾಪ ಮಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭ್ರಷ್ಟಾಚಾರದ ಕೂಪವಾಗಿ ನಿರ್ಮಾಣವಾಗಿದೆ. ನಿವೇಶನ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಅಧಿಕಾರಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹನುಮಂತೇ ಗೌಡ ಎಂಬುವವರ ಹೆಸರಿನಲ್ಲಿ 45 ಸೈಟುಗಳಿವೆ. ಹೀಗೆ ಆತನ ಬಳಿ ಇನ್ನೆಷ್ಟು ಸೈಟುಗಳಿರಬಹುದು. ಇದು 2ಜಿ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿದೆ. ಅರ್ಕಾವತಿ ಬಡಾವಣೆ ಹಗರಣಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ ಎಂದು ಶ್ಯಾಭಟ್ ಅವರು ಬೇಜವಾಬ್ದಾರಿಯಿಂದ ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.
ಇಷ್ಟಾದರೂ ರಾಜ್ಯ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಬ್ಬ ಅಧಿಕಾರಿಗೆ ಕಡತ ರಕ್ಷಿಸುವ ಹೊಣೆಗಾರಿಕೆಯೂ ಇಲ್ಲವೆಂದಾದರೆ ಸರ್ಕಾರ ಹೇಗೆ ನಡೆಯುತ್ತಿದೆ? ಬದಲಿ ನಿವೇಶನ ಹಗರಣದಲ್ಲಿಯೂ ಶ್ಯಾಮ್ ಭಟ್ ಕೈವಾಡವಿದೆ. 2 ವಿಚಾರದಲ್ಲಿ ಸಿಬಿಐ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದರು.
ಇದೇ ವೇಳೆ ಪ್ರತಿಪಕ್ಷಗಳ ಬೇಡಿಕೆಗಳನ್ನು ತಿರಸ್ಕರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದ್ದೇ ಆದರೆ, ಅದನ್ನು ರದ್ದು ಮಾಡಲಾಗುತ್ತದೆ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ವರೆಗೂ 12 ಸೈಟುಗಳನ್ನು ರದ್ದುಪಡಿಸಲಾಗಿದ್ದು. ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಇನ್ನು 6 ಸೈಟುಗಳನ್ನು ರದ್ದು ಪಡಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ವಿಚಾರಗಳಲ್ಲಿ ಕಾನೂನು ನಿಯಮಗಳನ್ನು ಅನುಸರಿಸಬೇಕಿದ್ದು, ತರಾತುರಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಜಾರ್ಜ್ ಅವರು ಹೇಳಿದರು.
ಇನ್ನು ಸರ್ಕಾರದ ಈ ಪ್ರತಿಕ್ರಿಯೆಗೆ ಸಮಾಧಾನಗೊಳ್ಳದ ಬಿಜೆಪಿ ನಾಯಕರು ಸದನದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿಗೆ ಕುಳಿತರು. ಹೀಗಾಗಿ ಹಂಗಾಮಿ ಸ್ಪೀಕರ್ ಶಿವಶಂಕರರೆಡ್ಡಿ ಅವರು ಅಧಿವೇಶನವನ್ನು ಮುಂದೂಡಿದರು.