ರಾಜ್ಯ

ಮತ್ತೆ ಚರ್ಚೆಗೆ ಬಂದ ಮೌಢ್ಯ ನಿಷೇಧ ಕಾಯ್ದೆ: ಸಂಪುಟ ಸಭೆಯಲ್ಲಿಂದು ಚರ್ಚೆ

Manjula VN

ಬೆಂಗಳೂರು: ಸಾಕಷ್ಟು ಪರ-ವಿರೋಧದ ಕೂಗುಗಳ ಮಧ್ಯೆಯೂ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಮೌಢ್ಯ ನಿಷೇಧ ಕಾಯ್ದೆ ಇದೀಗ ಮತ್ತೆ ಚರ್ಚೆ ಬಂದಿದ್ದು, ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗಾಗಿ ಚರ್ಚೆ ನಡೆಯಲಿದೆ.

ಹಿಂದಿನ ಮೌಢ್ಯ ನಿಷೇಧ ಕಾಯ್ದೆಯ ಕರಡು ನಿಯಮಗಳಿಗೆ ಸಾಕಷ್ಟು ಬದಲಾವಣೆಗಳನ್ನು ರಾಜ್ಯ ಸರ್ಕಾರ ತಂದಿದ್ದು, ವಿರೋಧ ವ್ಯಕ್ತವಾದ ಸಾಕಷ್ಟು ಆಚರಣೆಗಳ ಕಾಯ್ದೆಯನ್ನು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅಲ್ಲದೆ, ಮೌಢ್ಯ ಎನ್ನುವ ಪದವನ್ನೇ ಕೈ ಬಿಟ್ಟಿರುವ ಸರ್ಕಾರ ಪರಿಷ್ಕೃತ ಹೊಸ ಕಾಯ್ದೆಗೆ ಕರ್ನಾಟಕ ನರಬಲಿ ಮತ್ತು ಇತರ ಅಮಾನವೀಯ ದುಷ್ಟ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧಕ ನಿರ್ಮೂಲನಾ ವಿಧೇಯಕ-2016 ಎಂದು ಹಸರಿಸಲಾಗಿದೆ.

ಮಾನವ ಗೌರವ ಹಾಗೂ ಘನತೆಗೆ ಧಕ್ಕೆ ತರುವ ಮತ್ತು ಅಮಾನವೀಯ ಆಚರಣೆಗಳನ್ನು ಮಾತ್ರ ನಿರ್ಬಂಧಿಸುವ ಅವಕಾಶಗಳನ್ನು ಪರಿಷ್ಕೃತ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ವಾಮಾಚಾರ, ನರಬಲಿ, ತಂತ್ರಗಳು ಹಾಗೂ ಮಹಿಳೆಯರ ಬೆತ್ತಲು ಪೂಜೆ ನಡೆಸಿ ಜನರನ್ನು ಮೂರ್ಖರನ್ನಾಗಿ ಮಾಡಿ. ಮೋಸ ಮಾಡುವ ಚಟುವಟಿಕೆಗಳಿಗೆ ಸರ್ಕಾರ ನಿಷೇಧ ಹೇರಲಿದ್ದು,  ನಿಯಮ ಉಲ್ಲಂಘನೆ ಮಾಡುವವರಿಗೆ  ರು.25,000 ದಂಡ ಹಾಗೂ ಕನಿಷ್ಟ 7 ವರ್ಷ ಜೈಲು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇಂದು ನಡೆಯಲಿರುವ ಮೌಢ್ಯ ನಿಷೇಧ ಕಾಯ್ದೆ ಚರ್ಚೆಯಲ್ಲಿ ಸಚಿವರು ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದ್ದು, ಪ್ರಮುಖವಾಗಿ ಮಡೆ ಸ್ನಾನ, ವಾಸ್ತು ಹಾಗೂ ಭವಿಷ್ಯಗಳ ಕುರಿತಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಭವಿಷ್ಯಗಳ ಕುರಿತಂತೆ ಹಿರಿಯರು ನಂಬಿಕೆ ಇಟ್ಟಿದ್ದು, ಇಂತಹ ನಂಬಿಕೆಗಳ ಮಧ್ಯೆ ಪ್ರವೇಶ ಮಾಡದಿರುವಂತೆ ಹಾಗೂ ಮಡೆ ಸ್ನಾನವೊಂದು ದಕ್ಷಿಣ ಕನ್ನಡದ ಸಂಪ್ರದಾಯವಾಗಿದ್ದು, ಲಕ್ಷಾಂತರ ಮಂದಿಯ ನಂಬಿಕೆಯ ಆಚರಣೆ ಇದಾಗಿದೆ. ಹೀಗಾಗಿ ಇದರಲ್ಲೂ ಮಧ್ಯೆ ಪ್ರವೇಶ ಮಾಡದಂತೆ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT