ರಾಜ್ಯ

'ಮೌಢ್ಯನಿಷೇಧ ಕಾಯ್ದೆ' ಜಾರಿಗೆ ವಿರೋಧ: ವಿಫಲವಾಯ್ತು ಸರ್ಕಾರದ ಪ್ರಯತ್ನ

Manjula VN

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮೌಢ್ಯ ನಿಷೇಧ ಕಾಯ್ದೆಗೆ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದು, ವಿರೋಧದಿಂದಾಗಿ ಕಾಯ್ದೆ ಜಾರಿಗೆ ಸರ್ಕಾರ ಮಾಡಿದ ಪ್ರಯತ್ನ ವಿಫಲವಾಗಿದೆ.

ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಜನರನ್ನು ವಂಚಿಸುವ ಹಾಗೂ ಬಲಿ ತೆಗೆದುಕೊಳ್ಳುವಂತಹದ್ದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ತೀರ್ಮಾನಿಸಿತ್ತು. ಇದರಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ಜಾರಿಗಾಗಿ ಅನುಮೋದನೆ ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು.

ಆದರೆ ಸರ್ಕಾರದ ಕರ್ನಾಟಕ ನರಬಲಿ, ಇತರೆ ಅಮಾನವೀಯ ದುಷ್ಟ ಮತ್ತು ಅಘೋರಿ ಪದ್ಥತಿ ವಾಮಚಾರ ಪ್ರತಿಬಂಧ ಕಾಯ್ದೆ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆಯೇ ಸಂಪುಟದಲ್ಲಿ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು,

ನರಬಲಿ, ಪವಾಡ, ಅತೀಂದ್ರ ಶಕ್ತಿಗಳ ದುಷ್ಟ/ ಅಘೋರಿ ಪದ್ಧತಿ ಆಚರಣೆ, ಭಾನಾಮತಿ, ಮಾಟಮಂತ್ರ ಹೆಸರಲ್ಲಿ ನಿಧಿ ಪತ್ತೆ, ಮಡೆಸ್ನಾನ, ವಾಮಾಚಾರ, ಸಿಡಿ ಆಚರಣೆ, ಕೊಂಡ ಹಾಯುವುದು ಹೀಗೆ 23 ಆಚರಣೆಗಳನ್ನು ನಿಷೇಧಿಸುವ ಕಾಯ್ದೆ ಪ್ರಸ್ತಾವಕ್ಕೆ ಕೆಲವು ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೆಲ ಆಚರಣೆಗಳಿಗೆ ನಿರ್ಬಂಧ ಹೇರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಕಾಯ್ದೆ ಜಾರಿಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತದೆ ಎಂದು ಸಚಿವರು ಹೇಳಿದರು. ಇದರಂತೆ ಕಾಯ್ದೆ ಜಾರಿಗೆ ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವಂತೆ ಮುಂದೂಡುವ ತೀರ್ಮಾನ ಕೈಗೊಳ್ಳಲಾಯಿತು.

SCROLL FOR NEXT