ಬೆಂಗಳೂರು: ಶಾಲಾ ವ್ಯವಸ್ಥಾಪಕರು 20 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದರಿಂದ, ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿಇ)ಯಡಿ ದಾಖಲಾಗಿದ್ದ ಕಟ್ಟಡ ಕಾರ್ಮಿಕನ ಮಕ್ಕಳನ್ನು ಶಾಲೆಯಿಂದ ಬಿಡಿಸಲಾಯಿತು.
''ನನ್ನ ಇಬ್ಬರೂ ಮಕ್ಕಳು ವೈಟ್ ಫೀಲ್ಡ್ ಹತ್ತಿರ ಖಾಸಗಿ ಶಾಲೆಯೊಂದರಲ್ಲಿ ಕಳೆದ ವರ್ಷ ಆರ್ ಟಿಇಯಡಿ ದಾಖಲಾಗಿದ್ದರು. ನನ್ನಲ್ಲಿ 12 ಸಾವಿರ ರೂಪಾಯಿ ಕಟ್ಟಿ ಎಂದು ಶಾಲೆ ಕಡೆಯಿಂದ ಸೂಚನೆ ಬಂತು. ಆದರೆ ಅಷ್ಟು ಹಣ ಕಟ್ಟಲು ನನ್ನಿಂದ ಸಾಧ್ಯವಾಗಲಿಲ್ಲ. 5 ಸಾವಿರ ರೂಪಾಯಿ ಕಟ್ಟಿ ರಸೀದಿ ಪಡೆದೆ, ಶಾಲೆಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದರಿಂದ ಈಗ ನನ್ನ ಮಕ್ಕಳು ಶಾಲೆಗೆ ಹೋಗುವುದಿಲ್ಲ'' ಎನ್ನುತ್ತಾರೆ ಮಾರತಹಳ್ಳಿಯ ಗುಂಡಪ್ಪ.
ವೈಟ್ ಫೀಲ್ಡ್ ನ ಇನ್ನೊಂದು ಶಾಲೆಯಲ್ಲಿ ಇಂತಹದ್ದೇ ಸಮಸ್ಯೆಯನ್ನು ಎದುರಿಸಿದವರು ಕುಂಡನಹಳ್ಳಿ ನಿವಾಸಿ ಶ್ರೀನಿವಾಸ್ ವಿ.
ಶಾಲೆಯ ಯೂನಿಫಾರಂ ಮತ್ತು ಇತರ ಸ್ಟೇಷನರಿ ವಸ್ತುಗಳಿಗೆಂದು ಶಾಲಾ ವ್ಯವಸ್ಥಾಪಕರು 12 ಸಾವಿರದ 500 ರೂಪಾಯಿ ಬೇಡಿಕೆಯನ್ನಿಟ್ಟಿದ್ದಾರೆ. ನಾನು ಹಣ ಪಾವತಿಸಿದ್ದೇನೆ, ಆದರೆ ರಸೀದಿ ಸಿಕ್ಕಿಲ್ಲ. 10 ಸಾವಿರ ರೂಪಾಯಿ ಹಣ ಪಾವತಿ ಮಾಡಿದ್ದೀರಿ ಎಂದು ನನಗೆ ಮೊಬೈಲ್ ಗೆ ಮೆಸೇಜ್ ಮಾತ್ರ ಬಂದಿದೆ ಎನ್ನುತ್ತಾರೆ ಅವರು.
ಆರ್ ಟಿಇಯಡಿ ದಾಖಲಾಗುವ ಮಕ್ಕಳ ಪೋಷಕರಲ್ಲಿ ಮಿತಿಮೀರಿ ಹಣ ಸುಲಿಗೆ ಮಾಡುವುದು, ಕಟ್ಟಿದ ಹಣದಲ್ಲಿ ಸ್ವಲ್ಪ ಹಣಕ್ಕೆ ಮಾತ್ರ ರಸೀದಿ ನೀಡುವುದು ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಅಭ್ಯಾಸವಾಗಿದೆ. ಶಿಕ್ಷಣ ಸಂಸ್ಥೆಗಳು ಯೂನಿಫಾರ್ಮ್ ಮತ್ತು ಇತರ ಸ್ಟೇಷನರಿ ಖರ್ಚುವೆಚ್ಚವೆಂದು ವಿಪರೀತ ಹಣ ಸುಲಿಗೆ ಮಾಡುತ್ತಾರೆ. ಇನ್ನು ಕೆಲವು ಶಾಲೆಗಳು ಪ್ರವೇಶ ಶುಲ್ಕ ಪಡೆದಿದ್ದಕ್ಕೆ ಸ್ವೀಕೃತಿ ಪತ್ರ ನೀಡಲು ನಿರಾಕರಿಸುತ್ತವೆ.
ಹೀಗೆ ಆರ್ ಟಿಇ ಅಡಿ ದಾಖಲಾದ ಮಕ್ಕಳನ್ನು ಬೆಂಗಳೂರು ನಗರದ ಅನೇಕ ಶಾಲೆಗಳು ಅಸಡ್ಡೆ ಮಾಡುವುದಲ್ಲಗೆ ಪೋಷಕರಿಂದ ಹಣ ಸುಲಿಗೆ ಮಾಡುತ್ತವೆ ಎಂಬುದು ಆರ್ ಟಿಇ ಕಾರ್ಯಕರ್ತರ ಸರ್ಕಾರೇತರ ಸಂಘಟನೆ ನಾನು ನಾಗರಿಕ ಗುಂಪಿನ ರೇಣುಕಾ ವಿಶ್ವನಾಥನ್ ಅವರ ಆರೋಪ.