ಬೆಂಗಳೂರು: ಪವಿತ್ರ ರಂಜಾನ್ ಹಬ್ಬದ ನಂತರ ಮತ್ತೆ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಸಭೆ ವೇಳೆ ಪ್ರತಿಪಕ್ಷಗಳು ಅಧಿಕಾರಿಗಳ ಆತ್ಮಹತ್ಯೆ ಪ್ರಕರಣವಿಡಿದು ಸರ್ಕಾರದ ವಿರುದ್ಧ ವಿರೋಧಗಳನ್ನು ವ್ಯಕ್ತಪಡಿಸುತ್ತಿದೆ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು. ಇದರಂತೆ ಇಂದು ಮುಂಗಾರು ಅಧಿವೇಶನ ಮತ್ತೆ ಆರಂಭಗೊಂಡಿದ್ದು, ಡಿವೈಎಸ್ಪಿ ಕಲ್ಲಪ್ಪ ಹಾಗೂ ಗಣಪತಿ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣವಿಡಿದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಿದೆ.
ಒಂದೆಡೆ ಸಚಿವ ಪರಮೇಶ್ವರ್ ಅವರು ನಿಲುವಳಿಯನ್ನು ಮಂಡಿಸುತ್ತಿದ್ದರೆ, ಮತ್ತೊಂದೆಡೆ ವಿಪಕ್ಷಗಳು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಇದರಂತೆ ಸದನದಲ್ಲಿ ಉಂಟಾದ ಗದ್ದಲ ಹಿನ್ನೆಲೆಯಲ್ಲಿ ಸ್ಪೀಕರ್ ಕೋಳಿವಾಡ ಅವರು ಅಧಿವೇಶನವನ್ನು 12.30ಕ್ಕೆ ಮುಂದೂಡಿದರು.
ಕೊಲೆಗಡುಕ ಸರ್ಕಾರವೆಂದ ಜಗದೀಶ್ ಶೆಟ್ಟರ್
ಪೊಲೀಸ್ ಇಲಾಖೆಯಲ್ಲಿ ಒಬ್ಬರ ಹಿಂದೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ಸಭೆಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಇದೊಂದು ಕೊಲೆಗಡುಕ ಸರ್ಕಾರವೆಂದು ಹೇಳಿದ್ದಾರೆ.
ಕೊಲೆಗಡುಕ ಸರ್ಕಾರವೆಂದು ಘೋಷಣೆ ಕೂಗಿರುವ ಅವರು, ಸರ್ಕಾರದಿಂದ ಆತ್ಮಹತ್ಯೆ ಭಾಗ್ಯವೆಂಬ ಭಿತ್ತಿ ಚಿತ್ರ ಪ್ರದರ್ಶನವನ್ನು ಮಾಡಿದ್ದಾರೆ.
ಸರ್ಕಾರದ ವಿರುದ್ಧ ಚಾಟಿ ಬೀಸಿದ ಕೆ.ಎಸ್. ಈಶ್ವರಪ್ಪ
ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವಿಡಿದು ಸರ್ಕಾರ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ಚಾಟಿ ಬೀಸಿದ್ದಾರೆ.
ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಗೆ ಕಾರಣರಾರು ಎಂದು ವ್ಯಕ್ತಿಗಳ ಹೆಸರನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ಸಚಿವ ಜಾರ್ಜ್ ಹೆಸರನ್ನು ತೆಗೆದುಕೊಂಡಿದ್ದಾರೆ. ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ ಸಾವಿಗೆ ಕಾರಣ ಯಾರೆಂದು ಅವರು ಸೂಚಿಸಿದ್ದರೆ, ಆ ವ್ಯಕ್ತಿ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕೆಂದು ಸ್ವತಃ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ.
ದುರಾದೃಷ್ಟಕರ ಸಂಗತಿಯೆಂದರೆ ತಮ್ಮ ಆತ್ಮಹತ್ಯಗೆ ಕಾರಣ ಯಾರು ಎಂಬುದನ್ನು ಗಣಪತಿಯವರು ಸೂಚಿಸಿದ್ದರೂ ಕೂಡ ಸರ್ಕಾರ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಸುಪ್ರೀಂ ಸೂಚನೆಯನ್ನು ಧಿಕ್ಕರಿಸಿ ನಿಂತಿರುವಂತಿದೆ. ಇಂತಹ ಬೆಳವಣಿಗೆಗಳು ಕರ್ನಾಟದಲ್ಲಿ ಪ್ರಜಾಪ್ರಭುತ್ವ ಇದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ದೂರು ನೀಡಿದ್ದರೂ ಕ್ರಮವಿಲ್ಲ. ಇನ್ನು ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಕೊಲೆ ಮಾಡಬಹುದು. ಯಾಕೆಂದರೆ ಅವರ ವಿರುದ್ಧ ಇಲಾಖೆ ಎಫ್ಐಆರ್ ದಾಖಲಿಸಿಕೊಳ್ಳುವುದಿಲ್ಲ. ವಾಲಿಬಾಲ್ ಆಟಗಾರನಾಗಿದ್ದ ಗಣಪತಿಯವರು ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇಂತಹ ಕೊಡಗಿನ ವೀರ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ಅದೆಂತಹ ಕಿರುಕುಳವನ್ನು ನೀಡರಬೇಕು. ಅಂತಹ ಕಿರುಕುಳ ಏನಿತ್ತು ಎಂಬುದು ಆಘಾತಕಾರಿ ವಿಚಾರ. ನಿಜಕ್ಕೂ ಇದೊಂದು ನೋವಿನ ವಿಚಾರವಾಗಿದೆ ಎಂದು ಹೇಳಿದ್ದಾರೆ.