ರಾಜ್ಯ

ಡಿವೈಎಸ್ಪಿ ಕಲ್ಲಪ್ಪ ಪ್ರಕರಣ: ಆರೋಪಿ ಪ್ರವೀಣ್ ಕಂಡ್ಯಾ ವಿರುದ್ಧ 32 ಪ್ರಕರಣಗಳು ಬಾಕಿ

Manjula VN

ಬೆಂಗಳೂರು: ಚಿಕ್ಕಮಗಳೂರಿನ ಹಿಂದುತ್ವ ನಾಯಕ ಹಾಗೂ ಇನ್ನಿತರೆ ಸಂಘಟನೆಗಳ ಕಾರ್ಯಕರ್ತ ಪ್ರವೀಣ್ ಕಂಡ್ಯಾ ವಿರುದ್ಧ 32 ಪ್ರಕರಣಗಳು ಬಾಕಿ ಉಳಿದಿರುವುದಾಗಿ ತಿಳಿದುಬಂದಿದೆ.

ಹೋರಾಟಗಳಲ್ಲಿ ಕೇಳಿಬಂದಿದ್ದ ಪ್ರವೀಣ್ ಕಂಡ್ಯಾ ಹೆಸರು ಇದೀಗ ಕಳ್ಳತನ, ದರೋಡೆ ಹಾಗೂ ಅಪಹರಣ ಪ್ರಕರಗಳಲ್ಲೂ ಕೇಳಿಬರುತ್ತಿದೆ. ಪ್ರಸ್ತುತ ತೇಜಸ್ ಗೌಡ ಅವರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿ ಪ್ರವೀಣ್ ಬಂಧಿತನಾಗಿದ್ದಾನೆ.
 
ಪ್ರವೀಣ್ ಕಂಡ್ಯಾ ಮೂಲತಃ ಬಲೇ ಹೊನ್ನೂರಿನ ಕಂಡ್ಯಾ ಗ್ರಾಮದವನಾಗಿದ್ದು, ಈ ವರೆಗೂ 32 ಪ್ರಕರಣಗಳು ಈತನ ವಿರುದ್ಧವಿದೆ ಎಂದು ಚಿಕ್ಕಮಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವಕನಾಗಿದ್ದಾಗಲೇ ಹಿಂದುತ್ವ ಸಂಘಟನೆ ಕಡೆಗೆ ಆಕರ್ಷಿತನಾಗಿದ್ದ ಈತ, ಸಂಘಟನೆಗೆ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದ. ದತ್ತ ಜಯಂತಿ ಆಚರಣೆ ನಂತರ ವಿಹೆಚ್ ಪಿ ಮತ್ತು ಇನ್ನಿತರೆ ಸಂಘಟನೆಗಳಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ.

2010ರ ಮೇ ತಿಂಗಳಿನಲ್ಲಿ ಶೃಂಗೇರಿ ಮತ್ತು ಚಿಕ್ಕಮಗಳೂರಿನಲ್ಲಿ ಗೋವು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಈತನ ಮೇಲಿದೆ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಸಭೆ ವೇಳೆ ದಾಳಿ ಮಾಡಿದ್ದ ಪ್ರಕರಣದಲ್ಲೂ ಈತನ ಹೆಸರಿದೆ. ಅಲ್ಲದೆ, ಚಿಕ್ಕಮಗಳೂರಿಗಾಗಿ ವಿಧಾನಸೌಧ ಚಲೋ ಚಳುವಳಿಯಲ್ಲೂ ಪ್ರವೀಣ್ ಹೆಸರು ಕೇಳಿಬಂದಿತ್ತು.

ಅಲ್ದೂರಿನಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾದಲ್ಲಿ ಈತನ ಹೆಸರು ದಾಖಲಾಗಿದೆ. ಉತ್ತಮ ಸಂಘಟಿತಕಾರನಾಗಿದ್ದ ಪ್ರವೀಣ್ ಕಂಡ್ಯಾನನ್ನು ರಾಜಕೀಯ ನಾಯಕರು ಚುನಾವಣಾ ಪ್ರಚಾರದ ವೇಳೆ ಕೂಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಈತನ ವಿರುದ್ಧ ಅಪಹರಣ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಎಲ್ಲಿ ತಮ್ಮ ಹೆಸರು ಸೇರ್ಪಡೆಗೊಳ್ಳಿಬಿಡುತ್ತದೋ ಎಂಬ ಭಯದಿಂದ ಸಹವರ್ತಿಗಳು ಈತನಿಂದ ದೂರಾಗುತ್ತಿದ್ದಾರೆ.

SCROLL FOR NEXT