ತುಬರಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಅವರೊಂದಿಗೆ ಮಾತುಕತೆಯಲ್ಲಿ ಬಿನಿಸ್ ಥಾಮಸ್.
ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆ ಮಕ್ಕಳಿಗೆ ಅಸುರಕ್ಷತೆಯಾಗಿರುವುದರಿಂದ ಮತ್ತು ಸಾರಿಗೆ ಸೌಲಭ್ಯದ ಕೊರತೆಯಿಂದ ತುಬರಹಳ್ಳಿ ಸರ್ಕಾರಿ ಶಾಲೆಯ 12 ಮಕ್ಕಳು ಶಾಲೆ ಬಿಟ್ಟಿದ್ದಾರೆ ಎಂದು ಕಳೆದ ಶನಿವಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು.
ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಬಿನಿಶ್ ಥಾಮಸ್ ಎಂಬ ಹಲಸೂರಿನ ಗೌತಮಪುರದ ಸಾಮಾಜಿಕ ಕಾರ್ಯಕರ್ತ ಈ ಮಕ್ಕಳಿಗೆ ಉಚಿತ ಸಂಚಾರ ಸಾರಿಗೆ ವ್ಯವಸ್ಥೆ ನೀಡುವುದಾಗಿ ಹೇಳಿದ್ದಾರೆ. ಅವರು ಮೊನ್ನೆ ಮಂಗಳವಾರ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
'' ಪುಟ್ಟ ಬಾಲಕನೊಬ್ಬ ರಸ್ತೆ ದಾಟಲು ಹರಸಾಹಸಪಡುತ್ತಿರುವ ಫೋಟೋ ಪೇಪರಲ್ಲಿ ನೋಡಿ ನನ್ನ ಮನಕಲಕಿತು. ಸಾರಿಗೆ ಸೌಲಭ್ಯದ ಕೊರತೆಯಿಂದ ಅನೇಕ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂದು ಓದಿ ಆಘಾತವಾಯಿತು. ಮಕ್ಕಳಿಗೆ ಶಿಕ್ಷಣ ಸಿಗಬೇಕು ಏಕೆಂದರೆ ಅವರೇ ನಮ್ಮ ದೇಶದ ಭಾವಿ ಪ್ರಜೆಗಳು ಎಂದು ಬಿನಿಶ್ ಹೇಳುತ್ತಾರೆ.
ಇಂತಹ ಸಾಮಾಜಿಕ ಕಾಳಜಿ ವಿಷಯದ ಮೇಲೆ ಬೆಳಕು ಚೆಲ್ಲಿದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ಅವರು ಶ್ಲಾಘಿಸಿದರು.ಬಿನಿಶ್ ಥಾಮಸ್ ಅವರ ಸಹಾಯಕ್ಕೆ ಶಾಲಾ ಅಧಿಕಾರಿಗಳು ಸಂತೋಷಗೊಂಡಿದ್ದಾರೆ. ಈ ಕೊಡುಗೆಯನ್ನು ಸ್ವೀಕರಿಸಲು ನಾವು ತುಂಬಾ ಸಂತೋಷಗೊಂಡಿದ್ದೇವೆ.ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮಕ್ಕಳು ಶಾಲೆಗೆ ಬರುವುದನ್ನು ತಡೆಯಲು ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್.
ಈ ಹಿಂದೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಇರಲಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಈ ವಿಷಯವನ್ನು ಟ್ರಾಫಿಕ್ ಪೊಲೀಸ್ ಇಲಾಖೆಯ ಗಮನಕ್ಕೆ ತಂದಾಗ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ(ಟ್ರಾಫಿಕ್) ಆರ್.ಹಿತೇಂದ್ರ ಭರವಸೆ ನೀಡಿದ್ದಾರೆ.