ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು ಸಹಕರಿಸುವಂತೆ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಗುರುವಾರ ಮನವಿ ಮಾಡಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತಿ, ವಿಷ್ಣು ಸ್ಮಾರಕ ಮೈಸೂರಿನಲ್ಲೇ ನಿರ್ಮಾಣವಾಗಬೇಕು. ಹೀಗಾಗಿ ಸ್ಥಳಾಂತರಕ್ಕೆ ಸಹಕರಿಸಿ. ಕೆಲವರು ಸ್ಮಾರಕ ಸ್ಥಳಾಂತರಿಸಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂಥಹವರು ಮನಸ್ಸು ಬದಲಿಸಿಕೊಂಡು ನಮ್ಮೊಂದಿಗೆ ಸಹಕರಿಸಲಿ ಎಂದರು.
ಪ್ರಸ್ತುತ ವಿಷ್ಣು ಸ್ಮಾರಕವಿರುವ ಅಭಿಮಾನ್ ಸ್ಟುಡಿಯೋದ ಮಾಲಿಕತ್ವ ಹೊಂದಿರುವ ನಟ ಬಾಲಕೃಷ್ಣ ಅವರ ಮಕ್ಕಳಲ್ಲಿ ಒಗ್ಗಟ್ಟಿಲ್ಲ ಮತ್ತು ಅವರ ಪುತ್ರ ಹಗುರವಾಗಿ ಮಾತನಾಡಿರುವುದು ಮನಸ್ಸಿಗೆ ನೋವು ತಂದಿದೆ. ಹೀಗಾಗಿ, ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೊ ಜಾಗವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಬೇಲಿಯನ್ನೂ ನಿರ್ಮಿಸಿತ್ತು. ಆದರೆ, ಬೇಲಿಯನ್ನು ತೆರವುಗೊಳಿಸಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಅಲ್ಲಿ ಸ್ಮಾರಕ ಬೇಡ. ವಿಷ್ಣುವರ್ಧನ್ ಅವರು ಬಹುವಾಗಿ ಪ್ರೀತಿಸುತ್ತಿದ್ದ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸುವುದು ಸೂಕ್ತ ಎಂದರು.
ವಿಷ್ಣು ಸ್ಮಾರಕ ಸ್ಥಳಾಂತರ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಚಿತಾಭಸ್ಮ ಮತ್ತು ವಿಭೂತಿ ಸ್ಥಳಾಂತರಿಸಿದರೆ ಎಲ್ಲವೂ ಮುಗಿದಂತೆಯೇ. ವಿಷ್ಣು ಸ್ಮಾರಕ ಕೇವಲ ಸಮಾಧಿ ಮತ್ತು ಪುತ್ಥಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲೆ ಇತರೆ ಕಾರ್ಯಕ್ರಮಗಳು ನಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos