ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್ ರೈಲು ನಿಲ್ದಾಣ) ದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿರುವ ಲಯ ಎಂಬಾಕೆ ಯಾರಿಗೂ ಗೊತ್ತಿಲ್ಲ.
27 ವರ್ಷದ ಲೋಕೇಶ್ ನಾರಾಯಣ್ ರೆಡ್ಡಿ ಬಿ.ಕಾಂ ಪದವೀಧರನಾಗಿದ್ದು ಒಂದು ಸಮಯದಲ್ಲಿ ಬೆಂಗಳೂರಿನ ಪ್ರಮುಖ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಹುಡುಗ ಲೋಕೇಶ್ ಹೋಗಿ ಹುಡುಗಿ ಲಯ ಆಗಿದ್ದು ಹೇಗೆ ಇಲ್ಲಿದೆ ವಿವರ:
ಲಯಾ ಹುಟ್ಟಿದ್ದು ಹೈದರಾಬಾದಿನ ಮಧ್ಯಮ ವರ್ಗದ ಕುಟುಂಬದಲ್ಲಿ. ಆಕೆಯ ಪೋಷಕರು ಸರ್ಕಾರಿ ನೌಕರರು, 9 ಜನ ಸಹೋದರ, ಸಹೋದರಿಯರು ಲಯಾಗಿದ್ದರು. ಶಾಲೆಯಲ್ಲಿರುವಾಗ ಲಯಾಗೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಸ್ನೇಹಿತರು ಜಾಸ್ತಿಯಿದ್ದರು.
ಕೆಲ ವರ್ಷಗಳು ಕಳೆದ ನಂತರ ಲಯಾಳ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ದೊಡ್ಡವಳಾಗುತ್ತಿದ್ದಂತೆ ತಾನು ಮಹಿಳೆ ಎಂಬುದು ಲಯಾಳಿಗೆ ಅರಿವಾಗತೊಡಗಿತು. ಆಕೆಯ ಪೋಷಕರು ಮತ್ತು ಸಹೋದರ, ಸಹೋದರಿಯರೇ ಆಕೆಗೆ ಹಿಂಸೆ, ಕಿರುಕುಳ ನೀಡಲು ಆರಂಭಿಸಿದರು.
ಜೀವನದಲ್ಲಿ ಸೋಲೊಪ್ಪಿಕೊಳ್ಳಲು ಒಪ್ಪದ ಲಯಾ ಬಸವೇಶ್ವರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ನಂತರ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಿಗ್ರಿ ಪದವಿಗೆ ಸೇರಿಕೊಂಡಳು.
ಡಿಗ್ರಿ ಮುಗಿಸಿ ಹೊರಬಂದ ಲಯಾ ಕುಟುಂಬದಿಂದಲೂ ಹೊರನಡೆದಳು. ಆಕೆಯ ಸಹೋದರ-ಸಹೋದರಿಗಳ ಮದುವೆಗೂ ಲಯಾಳನ್ನು ಕರೆದಿರಲಿಲ್ಲ. ಇದೀಗ ಕುಟುಂಬದವರಿಂದ ಶಾಶ್ವತವಾಗಿ ದೂರಾಗಿದ್ದಾಳೆ.
ಕೆಲ ಸ್ನೇಹಿತರನ್ನು ಬಿಟ್ಟರೆ ಶಾಲಾ, ಕಾಲೇಜಿನಲ್ಲಿ ಸ್ನೇಹಿತರು, ಅಧ್ಯಾಪಕರು ಕೂಡ ಲಯಾಳನ್ನು ಕಂಡರೆ ತಮಾಷೆ, ತಿರಸ್ಕಾರ ಮಾಡುತ್ತಿದ್ದರಂತೆ.
ಡಿಗ್ರಿ ನಂತರ ಹಲವು ಕಂಪೆನಿಗಳಲ್ಲಿ ಕೆಲಸ ಮಾಡಿದ ಲಯಾ ಎಲ್ಲಿಯೂ ಬಹಳ ಕಾಲ ಕೆಲಸ ಮಾಡಲಿಲ್ಲ. ಹೋದಲ್ಲೆಲ್ಲಾ ಅವಮಾನಗಳೇ ಆಗುತ್ತಿದ್ದರಿಂದ ಎಲ್ಲಿಯೂ ನೆಲೆ ನಿಲ್ಲಲಾಗಲಿಲ್ಲ.
''ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಸಹೋದ್ಯೋಗಿಗಳು ನನ್ನನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದರು. ನನಗೆ ನಿಜಕ್ಕೂ ಆಘಾತವಾಯಿತು ಎಂದು ನೆನಪು ಮಾಡಿಕೊಳ್ಳುತ್ತಾಳೆ ಲಯಾ. ಕೆಲಸಕ್ಕೆ ಹೋಗುವಾಗ ಜೀನ್ಸ್, ಕುರ್ತಿ ತೊಟ್ಟುಕೊಳ್ಳುವುದನ್ನು ನೋಡಿ ಹಾಸ್ಯ ಮಾಡುತ್ತಿದ್ದರಂತೆ. ಕೆಲವು ಕಂಪೆನಿಗಳು ಲಯಾಗೆ ಉದ್ಯೋಗ ನೀಡಲೇ ಮುಂದಾಗುತ್ತಿರಲಿಲ್ಲವಂತೆ. ಹಾಗಾಗಿ ನೆಮ್ಮದಿ ಹುಡುಕಲು ಹೊರಟ ಲಯಾ ತನ್ನನ್ನು ಯಾರು ಸ್ವೀಕರಿಸುತ್ತಾರೋ ಅವರನ್ನು ಪಡೆಯಲು ಬಯಸುತ್ತಿದ್ದಳು.
ಆರಂಭದಲ್ಲಿ ಭಿಕ್ಷೆ ಬೇಡುತ್ತಿದ್ದ ಲಯಾಳಿಗೆ ನಂತರ ಸ್ವತಂತ್ರವಾಗಿ ಬದುಕಬೇಕೆಂಬ ತುಡಿತದಿಂದಾಗಿ ಅದರಿಂದ ಹೊರಬಂದಳು.
ಆಗ ಲಯಾಳ ಒಬ್ಬ ಸ್ನೇಹಿತೆ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಕಾಂಟ್ರಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಕ್ಲೀನರ್ ಕೆಲಸಕ್ಕೆ ಸೇರಿಸಿದರು. ಇದೀಗ ಲಯಾ ವೈಟ್ ಫೀಲ್ಡ್ ನಲ್ಲಿ ವಾಸಿಸುತ್ತಿದ್ದು ಆಕೆಯ ಕೆಲಸದಲ್ಲಿ ತೃಪ್ತಳಾಗಿದ್ದಾಳೆ. ಕಂಪ್ಯೂಟರ್ ಬಗ್ಗೆಯೂ ಸಾಕಷ್ಟು ತಿಳುವಳಿಕೆ ಇದೆ.
ಪ್ರತಿದಿನ ಮೂರು ರೈಲುಗಳನ್ನು ಸ್ವಚ್ಛ ಮಾಡುವ ಲಯಾಳಿಗೆ ತಿಂಗಳಿಗೆ 4 ಸಾವಿರ ರೂಪಾಯಿ ಪ್ರತಿ ರೈಲಿನಿಂದ ಸಿಗುತ್ತದೆ. ಸಂಬಳ ತನ್ನ ಜೀವನ ಸಾಗಿಸಲು ಸಾಕಾಗುತ್ತದೆ.
''ಸಮಾಜ ನಮಗೆ ಎರಡು ವೃತ್ತಿ ಆಯ್ಕೆಯನ್ನು ನೀಡಿದೆ, ಲೈಂಗಿಕ ಕಾರ್ಯಕರ್ತರಾಗಿ ಮತ್ತು ಭಿಕ್ಷಾಟನೆ. ಇತರರಂತೆ ಸಾಮಾನ್ಯ ಜೀವನ ನಡೆಸಲು ನಮಗೆ ಸಾಧ್ಯವಾಗುವುದಿಲ್ಲ.
''ನಮ್ಮಂತ ಜನರಿಗೂ ಜೀವನವಿದೆ. ನಾವು ಕೂಡ ಮನುಷ್ಯರು. ಆದರೆ ಕುಟುಂಬದವರೇ ನಮ್ಮನ್ನು ಸ್ವೀಕರಿಸುವುದಿಲ್ಲ. ಎಲ್ಲರಂತೆ ನಮ್ಮನ್ನು ಕೂಡ ಗೌರವದಿಂದ ಕಾಣಬೇಕೆಂಬುದೇ ನಮ್ಮ ಬೇಡಿಕೆ ಎಂದು ಮಾತು ಮುಗಿಸುತ್ತಾಳೆ ಲಯಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos