ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜೀವನ ಚರಿತ್ರೆ ಆಧರಿಸಿ 3 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಕನ್ನಡ ಚಲನಚಿತ್ರ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ ಸಭೆ ನಂತರ ಸಮಾಜ ಕಲ್ಯಾಣ ಸಚಿವ ಆಂಜನೇಯ ಈ ವಿಷಯ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡಲಾಗಿದೆ. ರಾಜ್ಯದಲ್ಲಿ ದೇವರಾಜ ಅರಸು ಅವರನ್ನು ಭೂಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಬಣ್ಣಿಸಲಾಗುತ್ತದೆ. ಈ ವರ್ಷ ಅವರ ಜನ್ಮಶತಮಾನೋತ್ಸವ ಆಚರಿಸಲಾಗುತ್ತಿದ್ದು, ಹಿಂದುಳಿದ ವರ್ಗಗಳ ಇಲಾಖೆಯಿಂದ ದೇವರಾಜ ಅರಸು ಅವರ ಸಂಪೂರ್ಣ ಜೀವನ ಚರಿತ್ರೆ ಒಳಗೊಂಡ ಚಲನಚಿತ್ರ ತಯಾರಿಸಲು ತೀರ್ಮಾನಿಸಲಾಗಿದೆ ಎಂದರು.
ವಿವಾದಕ್ಕೆ ಆಸ್ಪದ ನೀಡದ ರೀತಿ ಕಥೆ, ಚಿತ್ರಕಥೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ವಹಿಸಲಾಗಿದೆ. ಪಾತ್ರಧಾರಿಗಳನ್ನು ಅವರೇ ಆಯ್ಕೆ ಮಾಡಲಿದ್ದಾರೆ. ಅರಸು ಬಾಲ್ಯ, ಕೃಷಿಕನಾಗಿ, ಯುವ ನಾಯಕನಾಗಿ ಮತ್ತು ಮುಖ್ಯಮಂತ್ರಿಯಾಗಿ ಅವರು ಮಾಡಿರುವ ಸೇವೆ, ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಅವರ ರಾಜಕೀಯ ಜೀವನವನ್ನು ಇಡಿಯಾಗಿ ಚಿತ್ರದಲ್ಲಿ ತೋರಿಸಲಾಗುವುದು ಎಂದು ತಿಳಿಸಿದರು.