ರಾಜ್ಯ

ಸೆಲ್ಫೀ ವಿಡಿಯೋ ತೆಗೆದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Manjula VN

ಬೆಂಗಳೂರು: ತನ್ನ ಸಾವಿಗೆ ಕಾರಣರಾರೆಂಬುದನ್ನು ಸೆಲ್ಫೀ ವಿಡಿಯೋ ತೆಗೆದುಕೊಂಡ ವ್ಯಕ್ತಿಯೊಬ್ಬ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಾಜಿನಗರದಲ್ಲಿ ಭಾನುವಾರ ನಡೆದಿದೆ.

ನಜೀಮ್ ಪಾಷ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇಂದಿರಾ ನಗರದ ನಿವಾಸಿಯಾಗಿರುವ ನಜೀಮ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ಸಂಬಂಧಿಕರೊಬ್ಬರು ಕಷ್ಟ ಹೇಳಿಕೊಂಡ ಕಾರಣ ಗೆಳೆಯನ ಬಳಿ ರು.1 ಲಕ್ಷ ಸಾಲ ಕೊಡಿಸಿದ್ದಾನೆ. ಆದರೆ, ಸಾಲ ಹಿಂತಿರಿಸಲು ಆತ ನಿರಾಕರಿಸಿದ್ದಾನೆ ಹೀಗಾಗಿ ಆತ್ಮಹತ್ಯೆ ಶರಣಾಗುತ್ತಿದ್ದೇನೆಂದು ನಜೀಮ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸಂಬಂಧಿಕನ ವರ್ತನೆಯಿಂದ ಬೇಸತ್ತಿದ್ದ ನಜೀಮ್ ತನ್ನ ತಂಗಿ ಬೀಬಿ ಜಾನ್ ಮನೆಗೆ ಹೋಗಿ ಆತ್ಮಹತ್ಯೆ ಶರಣಾಗಿದ್ದಾನೆ. ಸಂಜೆ 5 ಗಂಟೆ ಸುಮಾರಿಗೆ ಬೀಜಿ ಜಾನ್ ಕೊಠಡಿಗೆ ಹೋದಾಗ ನಜೀಮ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಈ ವೇಳೆ ಆತನ ಪತ್ನಿ ನಗೀನಾ ಬಾನುಗೆ ವಿಚಾರ ತಿಳಿಸಿದ್ದಾಳೆ. ಕೂಡಲೇ ನಜೀಮ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಾಗಲೇ ನಜೀಮ್ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ನಂತರ ನಗೀನಾ ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ನಜೀಮ್ ಮೊಬೈಲ್ ನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸಾವಿಗೂ ಮುನ್ನ ನಜೀಮ್ ವಿಡಿಯೋ ಮಾಡಿರುವುದು ತಿಳಿದುಬಂದಿದೆ. ವಿಡಿಯೋದಲ್ಲಿ ನಜೀಮ್ ನನ್ನ ಸಾವಿಗೆ ತಾಯಿಯ ತಮ್ಮ ಅಧಿಲ್ ಅಹ್ಮದ್ ಕಾರಣ.

ಕಷ್ಟದಲ್ಲಿದ್ದ ಎಂದು ಗೆಳೆಯನ ಬಳಿ ರು. 1 ಲಕ್ಷ ಸಾಲ ಕೊಡಿಸಿದ್ದೆ. ಆದರೆ, ಆತ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದ. ಈ ಬಗ್ಗೆ ಪೊಲೀಸರ ಬಳಿ ಪ್ರಕರಣ ದಾಖಲಿಸಿದ್ದೆ. ದೂರನ್ನು ಹಿಂಪಡೆಯುವಂತೆ ಹಿಂಸೆ ನೀಡುತ್ತಿದ್ದ. ಹೀಗಾಗಿ ಬೇಸತ್ತು ಆತ್ಮಹತ್ಯೆ ಶರಣಾಗುತ್ತಿದ್ದೇನೆಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಈ ವಿಡಿಯೋವನ್ನು ವಾಟ್ಸ್ಅಪ್ ನಲ್ಲಿ ಗೆಳೆಯರು ಹಾಗೂ ಪರ ವಕೀಲರಿಗೆ ಹಂಚಿಕೊಂಡಿದ್ದಾನೆ.

ಶ್ರೀರಾಮ್ ಪುರದ ಪೊಲೀಸರು ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ನಜೀಮ್ ಸಾವಿಗೆ ಕಾರಣನಾದ ಅಧಿಲ್ ಅಹ್ಮದ್ ನನ್ನು ಬಂಧನಕ್ಕೊಳಪಡಿಸಿ ತನಿಖೆ ನಡೆಸುತ್ತಿದ್ದಾರೆ.

SCROLL FOR NEXT