ರಾಜ್ಯ

ಅಕ್ಕಸಾಲಿಗನಿಗೆ ತಾಮ್ರದ ಗಟ್ಟಿ ಕೊಟ್ಟು 2 ಕೆಜಿ ಚಿನ್ನ ಕದ್ದಿದ್ದ ಆರೋಪಿಗಳು ಅಂದರ್

Shilpa D

ಬೆಂಗಳೂರು: ಅಕ್ಕಸಾಲಿಗನ ಕೈಗೆ ತಾಮ್ರದ ಗಟ್ಟಿ ಕೊಟ್ಟು ಆತನ ಕೈಯಲ್ಲಿದ್ದ 2 ಕೆಜಿಗೂ ಅಧಿಕ ತೂಕದ ಚಿನ್ನದ ಸರಗಳನ್ನು ಅಪಹರಿಸಿದ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜ್ ಸುನೀಲ್ ಅಲಿಯಾಸ್ ಸಂಜಯ್ ಮತ್ತು ಈತನ ಸ್ನೇಹಿತ ನಂದಕುಮಾರ್‌ ಬಂಧಿತ ಖದೀಮರು. ಇವರು ಕೇರಳದ ಸಿಮೋದ್‌ ಎನ್ನುವ ಅಕ್ಕಸಾಲಿಗನ ಜತೆ ವ್ಯವಹಾರ ಕುದುರಿಸಿ ಕೊನೆಗೆ ಆತನ ಕೈಗೆ ತಾಮ್ರದ ಗಟ್ಟಿ ನೀಡಿ ಚಿನ್ನದ ಸರಗಳನ್ನು ಪಡೆದುಕೊಂಡು ಪರಾರಿಯಾಗಿದ್ದರು.

ಸುಮಾರು 70 ಲಕ್ಷ ರು. ಮೌಲ್ಯದ 2 ಕೆಜಿಗೂ ಅಧಿಕ ತೂಕದ ಚಿನ್ನವನ್ನು ಕಳೆದುಕೊಂಡಿದ್ದ ಸಿಮೋದ್‌ ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದ. ಕೋರಮಂಗಲ ಠಾಣೆ ಇನ್ಸ್‌ಪೆಕ್ಟರ್‌ ಎಂ.ಆರ್‌.ಅಜಯ್‌ ತಂಡ ಕೊನೆಗೂ ಆರೋಪಿಗಳಿಬ್ಬರನ್ನು ಬಂಧಿಸಿದೆ.

ಕ್ಯಾಬ್‌ ಡ್ರೈವರ್‌ ನಂದಕುಮಾರ್‌ ತನ್ನನ್ನು ತಾನು ಪ್ರತಿಷ್ಠಿತ ಚಿನ್ನದ ಕಂಪನಿಯೊಂದರ ಪ್ರತಿನಿಧಿ ಸಂಜಯ್‌ ಎಂದು ಹೇಳಿಕೊಂಡು ಕೇರಳದ ಸಿಮೋದ್‌ಗೆ ಕರೆ ಮಾಡಿದ್ದ. ತನ್ನ ಬಳಿ ಚಿನ್ನದ ಗಟ್ಟಿಗಳು ಇರುವುದಾಗಿಯೂ, ಅದರಿಂದ ಆಧುನಿಕ ವಿನ್ಯಾಸದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಸರಗಳನ್ನು ಮಾಡಿಕೊಡಬೇಕು ಎಂದು ಕೇಳಿದ್ದ. ನಂಬಿಕೆ ಬರುವ ಸಲುವಾಗಿ ಸಿಮೋದ್‌ ಬಳಿ ಚಿನ್ನದ ಒಡವೆಗಳನ್ನು ಮಾಡಿಸುವ ಹಲವರ ಹೆಸರುಗಳನ್ನೂ ಹೇಳಿದ್ದ ನಂದಕುಮಾರ್‌ನ ಮಾತಿಗೆ ಮರುಳಾದ ಸಿಮೋದ್‌, ವ್ಯವಹಾರಕ್ಕೆ ಒಪ್ಪಿಕೊಂಡಿದ್ದ. ಮೊದಲ ವ್ಯವಹಾರದಲ್ಲಿ ಪರಸ್ಪರರ ಬಗ್ಗೆ ನಂಬಿಕೆ ಬೆಳೆಯಿತು.

ತಮಗೆ 10 ಕೆಜಿ ಚಿನ್ನದ ಸರಗಳು ಬೇಕಾಗಿವೆ. ನಮ್ಮ ಬಳಿ 10 ಕೆಜಿ ಚಿನ್ನದ ಗಟ್ಟಿ ಇದೆ. ನೀವು ಸರಗಳನ್ನು ಮಾಡಿಕೊಂಡು ನಮ್ಮ ಕಚೇರಿಗೆ ಬಂದು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಹೋಗಬಹುದು ಎಂದು ನಂದಕುಮಾರ್‌ ತಿಳಿಸಿದ್ದ. ಅದಕ್ಕೂ ಒಪ್ಪಿಕೊಂಡ ಸಿಮೋದ್‌ , 2386 ಗ್ರಾಂ ತೂಕದ 160 ಚಿನ್ನದ ಸರಗಳನ್ನು ಸಿದ್ಧಪಡಿಸಿಕೊಂಡು ಬೆಂಗಳೂರಿಗೆ ಬಂದಿದ್ದರು.

ಕೋರಮಂಗಲದ 7ನೇ ಬ್ಲಾಕ್‌ನಲ್ಲಿ ತಾತ್ಕಾಲಿಕವಾಗಿ ಕಚೇರಿ ತೆರೆದಿದ್ದ ಆರೋಪಿ ಸಿಮೋದ್‌ರನ್ನು ಅಲ್ಲಿಗೇ ಕರೆಸಿಕೊಂಡ. 160 ಚಿನ್ನದ ಸರಗಳ ಕ್ವಾಲಿಟಿ ಪರೀಕ್ಷಿಸಿಕೊಂಡು ಬರುವುದಾಗಿ ಹೇಳಿದ ನಂದಕುಮಾರ್‌ ಕಚೇರಿಯಿಂದ ಹೊರಬಂದ. ಅದಕ್ಕೂ ಮೊದಲು ಚಿನ್ನದ ಗಟ್ಟಿಗಳು ಎಂದು ಹೇಳಿ ಸಿಮೋದ್‌ ಕೈಗೆ ಒಂದು ಬ್ಯಾಗ್‌ ಕೊಟ್ಟಿದ್ದ. ಹೊರಗೆ ಹೋದ ನಂದಕುಮಾರ್‌ ಎಷ್ಟೊತ್ತಾದರೂ ಬರದಿದ್ದಾಗ ಬ್ಯಾಗಿನಲ್ಲಿದ್ದ ಗಟ್ಟಿಗಳನ್ನು ತೆರೆದು ನೋಡಿದ ಸಿಮೋದ್‌ಗೆ ಶಾಕ್‌ ಕಾದಿತ್ತು. ಅದರಲ್ಲಿ ಇದ್ದದ್ದು ತಾಮ್ರದ ಗಟ್ಟಿಗಳು ಮಾತ್ರ.

ತಾನು ಮೋಸ ಹೋಗಿದ್ದು ಖಚಿತವಾಗುತ್ತಿದ್ದಂತೆ ಕೋರಮಂಗಲ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ನಂತರ ಕಾಲ್ ರೆಕಾರ್ಡ್ ಆಧಾರದ ಮೇಲೆ ತ್ಯಾಗರಾಜನಗರದ ಸುನೀಲ್ ಕುಮಾರ್ ಎಂಬಾತನನ್ನು ಕರೆಸಿ ವಿಚಾರಣೆ ಮಾಡಿದ ಪೊಲೀಸರು, ರೂವಾರಿ ತಾನೇ ಎಂದು ಸುನಿಲ್‌ ಒಪ್ಪಿಕೊಂಡ. ಈತ ಕೊಟ್ಟ ಸುಳಿವಿನ ಮೇರೆಗೆ ನಂದಕುಮಾರ್‌ ಕೂಡ ಸಿಕ್ಕಿ ಬಿದ್ದಿದ್ದಾನೆ .

SCROLL FOR NEXT