ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ರಚನೆಯಾಗುವುದಕ್ಕೂ ಮುನ್ನ ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ಗಳನ್ನು ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ನ್ಯಾ.ಸುಭ್ರೋ ಕಮಲ್ ಮುಖರ್ಜಿ ಹಾಗೂ ನ್ಯಾ. ರವಿ ಮಾಲಿಮಠ್ ಅವರ ವಿಭಾಗೀಯ ಪೀಠ, ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾಗುವುದಕ್ಕೂ ಮುನ್ನ ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಎಫ್ ಐ ಆರ್ ದಾಖಲಿಸಬಹುದಾಗಿದೆ ಎಂದು ಹೇಳಿದ್ದು ಎಫ್ ಐಆರ್ ದಾಖಲಿಸಿದ ನಂತರವೂ ಪ್ರಾರಣಗಳ ಬಗ್ಗೆ ತನಿಖೆ ಮುಂದುವರೆಸಬಹುದು ಎಂದಿದೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಎಫ್ ಐ ಆರ್ ದಾಖಲಿಸುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಗೊಂದಲ ಮೂಡಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಸ್ಪಷ್ಟನೆ ನೀಡಿದೆ.