ರಾಜ್ಯ

ವೈದ್ಯಕೀಯ ಸೀಟು ನಂತರ, ದುಬಾರಿಯಾಯ್ತು ಡಿಪ್ಲೋಮಾ ಶಿಕ್ಷಣ

Manjula VN

ಬೆಂಗಳೂರು: ಸಾಕಷ್ಟು ಹೋರಾಟಗಳ ಬಳಿಕ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳು ತನ್ನ ಶುಲ್ಕವನ್ನು ಹೆಚ್ಚಿಸಿಕೊಂಡಿತ್ತು. ಇದೀಗ ಇದೇ ಹಾದಿ ತುಳಿಯಲು ಡಿಪ್ಲೋಮಾ ಕೋರ್ಸ್ ಗಳೂ ಕೂಡ ಮುಂದಾಗಿದ್ದು, ಶೇ.20 ರಷ್ಟು ಶುಲ್ಕ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ.

ಶುಲ್ಕ ಹೆಚ್ಚಳ ಕುರಿತಂತೆ ನಿನ್ನೆ ಘೋಷಣೆ ಮಾಡಿರುವ ತಾಂತ್ರಿಕ ಶಿಕ್ಷಣ ಇಲಾಖೆಯು, ಕಳೆದ ನಾಲ್ಕು ವರ್ಷಗಳಿಂದಲೂ ಕೋರ್ಸ್ ಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಪಾಲಿಟೆಕ್ನಿಕ್ ಮತ್ತು ಡಿಪ್ಲೋಮಾ ಕೋರ್ಸ್ ಗಳ ಶುಲ್ಕವನ್ನು ಶೇ.20 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿಕೊಂಡಿದೆ.

ಪ್ರತೀ ವರ್ಷ ಶುಲ್ಕಗಳ ಪುನರಾವರ್ತಸಿಲಾಗುತ್ತಿತ್ತು. ಆದರೆ, 2013-13 ವರ್ಷದಿಂದ ಶುಲ್ಕವನ್ನು ಪರಿಷ್ಕರಿಸಲಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದಿಂದ ಪಾಲಿಟೆಕ್ನಿಕ್ ಮತ್ತು ಡಿಪ್ಲೋಮಾ ಕೋರ್ಸ್ ಗಳ ಶುಲ್ಕವನ್ನು ಶೇ.20 ರಷ್ಟು ಏರಿಕೆ ಮಾಡಲಾಗಿದೆ.

ಈ ಹಿಂದೆ ಸರ್ಕಾರಿ ಕಾಲೇಜುಗಳಲ್ಲಿ ಡಿಪ್ಲೋಮಾ ಕೋರ್ಸ್ ಗಳಿಗೆ ರು.2,300 ಹಣವನ್ನು ನಿಗದಿ ಮಾಡಲಾಗಿತ್ತು. ಇದೀಗ ರು.500 ಹಣವನ್ನು ಏರಿಕೆ ಮಾಡಲಾಗಿದೆ. ಅನುದಾನಿತ ಕಾಲೇಜುಗಳು ಹಾಗೂ ಖಾಸಗಿ ಅನುದಾನರಹಿತ ಕಾಲೇಜುಗಳ ಶುಲ್ಕ ರು.4,440 ರಿಂದ ರು.5,350 ರಷ್ಟು ಏರಿಕೆಯಾಗಿದೆ. ಆಡಳಿತ ಮಂಡಳಿಯ ಮೀಸಲಾತಿ ಶುಲ್ಕಗಳೂ ಕೂಡ ರು. 9,450 ರಿಂದ 11,500 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ 312 ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಇದರಲ್ಲಿ 81 ರಷ್ಟು ಕಾಲೇಜುಗಳು ಸರ್ಕಾರಿ ಕಾಲೇಜುಗಳಾಗಿವೆ. 44 ಅನುದಾನಿತ ಹಾಗೂ 187 ಅನುದಾನ ರಹಿತ ಖಾಸಗಿ ಕಾಲೇಜುಗಳಿವೆ. ಪ್ರಸ್ತುತ 2016ರ ವರ್ಷದಲ್ಲಿ 48,000 ರಷ್ಟು ವಿದ್ಯಾರ್ಥಿಗಳು ಪಾಲಿಟೆಕ್ನಿಕ್ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

2015-16ನೇ ಸಾಲಿನಲ್ಲಿ 95,646 ಸೀಟುಗಳು ಲಭ್ಯವಿದ್ದು, ಇದರಲ್ಲಿ ಈಗಾಗಲೇ 59,812ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 35,834 ಸೀಟುಗಳು ಮಾತ್ರ ಖಾಲಿಯಿದೆ ಎಂದು ಇಲಾಖೆ ತಿಳಿಸಿದೆ.

SCROLL FOR NEXT