ಬೆಂಗಳೂರು: ತಾನೊಬ್ಬ ವಿವಿ ಕುಲಪತಿ ಎಂದು ಹೇಳಿಕೊಂಡು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟು ಕೊಡಿಸುವುದಾಗಿ ಹಣ ಪಡೆದು ಸುಮಾರು 40 ಶಿಕ್ಷಣ ಸಂಸ್ಥೆಗಳಿಗೆ ವಂಚಿಸಿದ್ದ ಸಂತೋಷ್ ಲೋಹರ್ (37) ಎಂಬಾತನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಂತೋಷ್ 2002ರಲ್ಲಿ ನಗರಕ್ಕೆ ಬಂದಿದ್ದ. ಆತ ಬಯೋ–ಕೆಮಿಕ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂದು ಹೇಳಿಕೊಂಡು, ಕಾಲೇಜುಗಳಿಗೆ ಮಾನ್ಯತೆ ನೀಡುವುದಾಗಿ ಮತ್ತು ಎಂಜಿನಿಯರಿಂಗ್, ವೈದ್ಯಕೀಯ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಆರಂಭದಲ್ಲಿ ಈತ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ವಂಚಿಸಲು ಯತ್ನಿಸಿದ್ದ . ಆದರೆ, ವಿದ್ಯಾರ್ಥಿಗಳಿಗೆ ಮೋಸ ಮಾಡಲು ಸಾಧ್ಯವಾಗದಿದ್ದಾಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಗಳನ್ನೇ ವಂಚಿಸಿದ್ದಾನೆ. ಅದಕ್ಕಾಗಿ ನಾನಾ ಕಡೆ ಹಲವಾರು ವಂಚಕ ಗೆಳೆಯರನ್ನು ಇಟ್ಟುಕೊಂಡಿದ್ದ.
ಹೊಸದಾಗಿ ಸ್ಥಾಪನೆಯಾಗುವ ಕಾಲೇಜುಗಳ ಆಡಳಿತ ಮಂಡಳಿಯನ್ನು ಸಂಪರ್ಕಿಸುತ್ತಿದ್ದ ಸಂತೋಷ್ ವೈದ್ಯ ಮತ್ತು ಅರೆವೈದ್ಯ ಕಾಲೇಜುಗಳ ಆರಂಭಕ್ಕೆ ಅನುಮತಿ ಕೊಡಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದ. ಅಲ್ಲದೆ, ಈಗಾಗಲೇ ಇರುವ ಕಾಲೇಜುಗಳಿಗೆ ಹೋಗಿ ಬಯೋಮೆಡಿಕಲ್, ಪ್ಯಾರಾ ಮೆಡಿಕಲ್ ಮತ್ತು ಬಯೋ ನರ್ಸಿಂಗ್‌ನ ಹೊಸ ಕೋರ್ಸ್‌ಗಳ ಆರಂಭಕ್ಕೆ ಅನುಮತಿ ನೀಡುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ಪಡೆದಿದ್ದ. ಅವರನ್ನೆಲ್ಲ ನಂಬಿಸಲು ಬಯೋ ಕೆಮಿಕ್ ಗ್ರಾಂಟ್ ಕಮಿಷನ್, ಯೂನಿವರ್ಸಿಟಿ ಆಫ್ ಬಯೋ ಕೆಮಿಕ್ ಹೆಲ್ತ್ ಸೈನ್ಸ್ ಸೇರಿದಂತೆ ನಾಲ್ಕು ನಕಲಿ ವಿವಿಗಳನ್ನು ಸೃಷ್ಟಿಸಿದ್ದ. ಇದಕ್ಕಾಗಿ ಸರ್ಕಾರಿ ಸಂಸ್ಥೆಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ.
ಈ ನಡುವೆ ಪಶ್ಚಿಮ ಬಂಗಾಳ ಪೊಲೀಸರು ಮೇ 6ರಂದು ಬಯೋ ಕೆಮಿಕ್ ಗ್ರಾಂಟ್ ಕಮಿಷನ್‌ನ ಸಿಇಒ ಎಂದು ಹೇಳಿಕೊಂಡಿದ್ದ ಶ್ಯಾಮಲ್‌ದತ್ತಾ ಎಂಬುವನನ್ನು ಬಂಧಿಸಿದ್ದರು. ಇದೇ ಕಮಿಷನ್ ಹೆಸರಿನಲ್ಲಿ ಸಂತೋಷ್ ಲೋಹಾರ್, ಏರಿಸ್ ಎಜುಕೇಷನ್ ಟ್ರಸ್ಟ್‌ನ ಟಿ.ಸಿ.ಅರಿವಳಗನ್ ಎಂಬುವರನ್ನು ಸಂಪರ್ಕಿಸಿದ್ದ. ಈ ವೇಳೆ ಅವರು ಸಂತೋಷ್ ಬಳಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಮಾಧ್ಯಮಗಳಲ್ಲಿ ಬಂದ ಸುದ್ದಿ ಸುಳ್ಳು ಎಂದು ನಂಬಿಸಿದ್ದ ಸಂತೋಷ್ ಅವರಿಂದ 90 ಲಕ್ಷ ರೂ. ಹಣ ಪಡೆದಿದ್ದ. ಇದಾದ ಬಳಿಕ ಅರಿವಳಗನ್ ಅವರು ಜೆ.ಪಿ.ನಗರದಲ್ಲಿದ್ದ ಬಯೋ ಕೆಮಿಕ್ ಗ್ರಾಂಟ್ ಕಮಿಷನ್ ಕಚೇರಿಗೆ ಭೇಟಿ ನೀಡಿದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ಹೀಗಾಗಿ ಅವರು ದೂರು ನೀಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಶ್ಯಾಮಲ್ ದತ್ತಾ ಬಂಧನ ಸುದ್ದಿ ಗೊತ್ತಾದ ತಕ್ಷಣ ಸಂತೋಷ್‌ಗೆ ಹಣ ಕೊಟ್ಟಿದ್ದವರೆಲ್ಲಾ ಮುಗಿಬೀಳಲಾರಂಭಿಸಿದ್ದರು. ಹೀಗಾಗಿ ಆತ ತಲೆ ಮರೆಸಿಕೊಂಡು ಓಡಾಡಲು ಶುರು ಮಾಡಿದ. ಈ ನಡುವೆ ಅರಿವಳಗನ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಸಂತೋಷ್‌ನ ಹಳೆ ಮೊಬೈಲ್ ನಂಬರಿನ ಕರೆ ವಿವರ ತೆಗೆದಿದ್ದಾರೆ. ನಂತರ ಬನ್ನೇರು ಘಟ್ಟದ ಅಪಾರ್ಟ್ ಮೆಂಟ್ ನಲ್ಲಿದ್ದ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ಈ ಕೃತ್ಯ ಎಸಗುತ್ತಿದ್ದ. ಈ ವಿಷಯ ಅಧಿಕಾರಿಗೆ ತಿಳಿದಿರಲಿಲ್ಲ ಎಂದು ತಿಳಿದು ಬಂದಿದೆ.