ಬೆಂಗಳೂರು: ಕಾಮೆಡ್ ಕೆ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಇದೀಗ ಖಾಸಗಿ ಕಾಲೇಜುಗಳು ಶುಲ್ಕವನ್ನು ಕಡಿತಗೊಳಿಸಲು ಮುಂದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿಳಂಬ ನೀತಿ ಮತ್ತು ಗೊಂದಲದ ಮಧ್ಯೆಯೂ ನಿನ್ನೆ ಕಾಮೆಡ್ ಕೆ ಕೌನ್ಸಿಲಿಂಗ್ ಆರಂಭಗೊಂಡಿತ್ತು. ಆದರೆ, ರಾಜ್ಯದ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳು ಸೀಟುಗಳು ದುಬಾರಿಯಾದ್ದರಿಂದ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿರುವುದು ಎದ್ದುಕಾಣುತ್ತಿತ್ತು. ಹೊರ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಸೀಟುಗಳನ್ನು ಪಡೆಯುತ್ತಿರುವುದು ಕಂಡು ಬಂದಿತ್ತು.
ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮುಂದಾದ ಖಾಸಗಿ ಕಾಲೇಜುಗಳು ಶೇ. 10 ರಷ್ಟು ಮಾತ್ರ ಶುಲ್ಕ ಹೆಚ್ಚಿಸಿಕೊಳ್ಳಲು ನಿರ್ಧಾರ ಕೈಗೊಂಡವು. ಈ ಹಿಂದೆ ಕಾಮೆಡ್ ಕೆ ಮೀಸಲಾತಿಯಿಂದ ರು.1.21 ಲಕ್ಷ ಮತ್ತು 1.70 ಲಕ್ಷಯಿದ್ದ ಸೀಟುಗಳನ್ನು ನೀಡಲು ನಿರ್ಧರಿಸಿದ್ದ ಖಾಸಗಿ ಕಾಲೇಜುಗಳು ವಾರ್ಷಿಕ ಶುಲ್ಕವನ್ನು ರು. 60,000 ಇಳಿಸಿತು.
ಬೆಳಗಾವಿಯ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಸಂಸ್ಥೆಯು ಮೆಕಾನಿಕಲ್ ಇಂಜಿನಿಯರಿಂಗ್ ಸೀಟಿಗೆ ರು. 1.21 ಲಕ್ಷ, ಸಿವಿಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಸೀಟುಗಳಿಗೆ ರು. 1 ಲಕ್ಷ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಗೆ ವಾರ್ಷಿಕ ಶುಲ್ಕವನ್ನು ರು. 70 ಸಾವಿರಕ್ಕೆ ನಿಗದಿಪಡಿಸಿತು.