ಕಲಬುರ್ಗಿ: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಮತ್ತೆ ಸಂತ್ರಸ್ತ ವಿದ್ಯಾರ್ಥಿನಿಯನ್ನು ಭೇಟಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಹಿರಿಯ ವಿದ್ಯಾರ್ಥಿನಿಯರು ಟಾಯ್ಲೆಟ್ ಕುಡಿಸಿ ರ‍್ಯಾಗಿಂಗ್ ಮಾಡಿದ್ದರು ಎಂದು ಹೇಳಿ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಳು. ಪ್ರಕರಣ ಸಂಬಂಧ ವಿದ್ಯಾರ್ಥಿನಿ ಕೇರಳದ ಕೋಝಿಕೋಡ್ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈಗಾಗಲೇ ಅಂತಿಮ ಘಟ್ಟ ತಲುಪಿದ್ದು, ಸಂತ್ರಸ್ತ ವಿದ್ಯಾರ್ಥಿ ಚೇತರಿಕೆಗೊಂಡ ಬಳಿಕ ಮತ್ತೆ ಆಕೆಯನ್ನು ಭೇಟಿಯಾಗಿ ವಿಚಾರಣೆ ನಡೆಸುವುದಾಗಿ ತನಿಖಾ ತಂಡ ತಿಳಿಸಿದೆ.
ಮೂಲಗಳ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿಯ ಸ್ಥಿತಿ ಈಗಾಗಲೂ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳಲು ಸಂಕಷ್ಟ ಪಡುತ್ತಿದ್ದಾರೆಂದು ತಿಳಿದುಬಂದಿದೆ. 15 ನಿಮಿಷಗಳ ಹೇಳಿಕೆ ದಾಖಲಿಸಿಕೊಳ್ಳಲು ಅಧಿಕಾರಿಗಳು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಈ ಮಧ್ಯೆ ಪ್ರಕರಣ ಸಂಬಂಧ ಕೇರಳಗೆ ಹೋಗಿದ್ದ ಡಿವೈಎಸ್ ಪಿ ಜಾನ್ಹವಿ ಮತ್ತು ಸಿಪಿಐ ಶಂಕರ್ ಗೌಡ ಪಾಟೀಲ್ ನೇತೃತ್ವದ 11 ಸದಸ್ಯರ ತಂಡ ಇಂದು ಕಲಬುರ್ಗಿಗೆ ಮರಳಿ ಬರಲಿದೆ ಎಂದು ಹೇಳಲಾಗುತ್ತಿದೆ.
ಸಂತ್ರಸ್ತ ವಿದ್ಯಾರ್ಥಿನಿಗೆ ಮತ್ತೊಂದು ಶಸ್ತ್ರಚಿಕಿತ್ಸೆ: ವೈದ್ಯರು
ಸಂತ್ರಸ್ತ ವಿದ್ಯಾರ್ಥಿನಿ ಅಶ್ವಥಿಗೆ ಕೋಝಿಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು ನಿನ್ನೆಯಷ್ಟೇ ಎಂಡೊಸ್ಕೊಪಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರ ಚಿಕಿತ್ಸೆ ನಂತರವೂ ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ. ವಿದ್ಯಾರ್ಥಿನಿ ಚೇತರಿಕೆಗೊಳ್ಳಲು 1 ರಿಂದ 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.