ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನಲ್ಲಿ ಭೂಮಿಯೊಳಗೆ ಹುದುಗಿದ್ದ ಶಿವಲಿಂಗ, ಭ್ರಮರಾಂಬಿಕ ವಿಗ್ರಹಗಳನ್ನು ಹೊರತೆಗೆಯಲಾಗಿದೆ.
ಇಲ್ಲಿನ ಕೈಲಾಸಲಿಂಗ ಶಿವಾಚಾರ್ಯ ಸ್ವಾಮಿಜಿ ಕನಸಿನಲ್ಲಿ ಕಂಡದ್ದು ಭೂಮಿಯೊಳಗೆ ಹುದುಗಿದ್ದ ಶಿವಲಿಂಗ, ಭ್ರಮರಾಂಬಿಕ ವಿಗ್ರಹಗಳನ್ನು ಹೊರತೆಗೆಯಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಗೌರ್(ಕೆ) ಗ್ರಾಮದಲ್ಲಿರುವ ಕೈಲಾಸಲಿಂಗ ಶಿವಾಚಾರ್ಯ ಸ್ವಾಮಿಜಿಗೆ ಶಿವರಾತ್ರಿಗೂ ಹಿಂದಿನ ದಿನ ಕನಸಿನಲ್ಲಿ ಕಾಣಿಸಿಕೊಂಡ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಗೌರ್(ಕೆ) ಗ್ರಾಮದಲ್ಲಿರುವ ಸುನಿಲ್ ದಫೇದಾರ್ ಎಂಬ ವ್ಯಕ್ತಿಯ ಹೊಲದಲ್ಲಿ ತಾನಿರುವುದಾಗಿ ತಿಳಿಸಿದ್ದನಂತೆ.
ಮಾ.9 ರಂದು ಕನಸಿನ ಬಗ್ಗೆ ಕೈಲಾಸಲಿಂಗ ಶಿವಾಚಾರ್ಯ ಸ್ವಾಮಿಗಳು ಗ್ರಾಮಸ್ಥರಿಗೆ ತಮ್ಮ ಕನಸಿನ ಬಗ್ಗೆ ತಿಳಿಸಿ, ದೇವರು ಹೇಳಿದ ಸ್ಥಳದಲ್ಲಿ ಉತ್ಖನನ ನಡೆಸಲು ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದ್ದಾರೆ. ಪ್ರಾರಂಭದ ಹಂತದಲ್ಲಿ ಗ್ರಾಮಸ್ಥರು ಯಾರೂ ಸ್ವಾಮಿಜಿಗಳ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಗ್ರಾಮಸ್ಥರು ಉತ್ಖನನ ಕಾರ್ಯಕ್ಕೆ ಮುಂದಾಗದೇ ಇದ್ದಾಗ ಸ್ವತಃ ತಾವೇ ಆ ಸ್ಥಳದಲ್ಲಿ ಉತ್ಖನನ ಕಾರ್ಯಾಚಾರಣೆ ಮಾಡಲು ಮುಂದಾಗಿದ್ದಾರೆ. ಇದಾದ ಬಳಿಕ ಶಿವಾಚಾರ್ಯ ಸ್ವಾಮಿಗಳಿಗೆ ಸಹಾಯ ಮಾಡಲು ಮುಂದಾದ ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಭೂಮಿಯನ್ನು ಅಗೆಯಲು ಪ್ರಾರಂಭಿಸಿದ್ದಾರೆ.
ಭೂಮಿ ಅಗೆಯುತ್ತಿದ್ದಂತೆ 30 ಅಡಿ ಆಳದಲ್ಲಿ ದೇವಾಲಯವೊಂದು ಪತ್ತೆಯಾಗಿದೆ. ದೇವಾಲಯದಲ್ಲಿ ಶಿವಲಿಂಗ ಭ್ರಮರಾಂಬಿಕ ಹಾಗೂ ನಾಗದೇವತೆಯ ವಿಗ್ರಹ ಪತ್ತೆಯಾಗಿದೆ. ವಿಶೇಷವೆಂದರೆ ಶಿವಲಿಂಗ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲದಲ್ಲಿರುವ ಲಿಂಗವನ್ನೆ ಹೋಲುತ್ತಿದೆ.
ಭೂಮಿ ಅಗೆದ ಜೆಸಿಬಿ ನಿರ್ವಾಹಕ ತನಗೆ ನೀಡಿದ್ದ ಹಣ ಕಡಿಮೆಯಾಯಿತು ಎಂದು ಸ್ವಾಮಿಗಳ ವಿರುದ್ಧ ಅಸಮಾಧಾನಗೊಂಡಿದ್ದ, ಅಸಮಾಧಾನದಿಂದ ವಾಪಸ್ಸಾಗುತ್ತಿದ್ದ ಆತನಿಗೆ ಮಾರ್ಗಮಧ್ಯದಲ್ಲಿ ಸರ್ಪವೊಂದು ಕಾಣಿಸಿಕೊಂಡು ಮುಂದೆ ಸಾಗುವುದಕ್ಕೆ ಅವಕಾಶ ನೀಡಲಿಲ್ಲವಂತೆ. ಇದರಿಂದ ಭಯಗೊಂಡ ಜೆಸಿಬಿ ನಿರ್ವಾಹಕ ಸ್ವಾಮಿಗಳು ನೀಡಿದ್ದ 500 ರುಪಾಯಿಗಳನ್ನು ಅವರಿಗೇ ವಾಪಸ್ ನೀಡಿದ ಎಂದು ಸ್ಥಳೀಯರು ದೇವಾಲಯ ಉತ್ಖನನದ ಸಂದರ್ಭದಲ್ಲಿ ಉಂಟಾದ ಅಚ್ಚರಿಗಳನ್ನು ವಿವಿವರಿಸಿದ್ದಾರೆ.