ಬೆಂಗಳೂರು: ಈ ವರ್ಷ ಬೆಂಗಳೂರು ಬಿಸಿಲು ಚೆನ್ನೈ ಬಿಸಿಲನ್ನು ಹಿಂದಿಕ್ಕಿದೆ.
ಇದೀಗ ನಾಲ್ಕೈದು ದಿನಗಳಿಂದ ಎಲ್ಲರ ಬಾಯಲ್ಲೂ ಬಿಸಿಲಿನದ್ದೇ ಸುದ್ದಿ. ಬಿಸಿಲಿಗೆ ಸೆಖೆಯಾಗುತ್ತಿದೆ, ಸುಸ್ತಾಗುತ್ತಿದೆ, ನೀರು ಕುಡಿದಷ್ಟು ಸಾಕಾಗುವುದಿಲ್ಲ, ತಿನ್ನಲು ಏನೂ ಸೇರುವುದಿಲ್ಲ ಹೀಗೆ ಎಲ್ಲರೂ ಮಾತಾಡಿಕೊಳ್ಳುವುದನ್ನು ಕೇಳುತ್ತೇವೆ. ಇದಕ್ಕೆ ಕಾರಣ ವಿಪರೀತ ಬಿಸಿಲು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸೆಖೆ ಕಡಿಮೆಯಿರುವ ಬೆಂಗಳೂರು ಈ ಬಾರಿ ಚೆನ್ನೈ ನಗರವನ್ನು ಹಿಂದಿಕ್ಕಿದೆ. ನಗರದಲ್ಲಿ ನಿನ್ನೆ ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಸಾಮಾನ್ಯವಾಗಿ ಚೆನ್ನೈ ಬಿಸಿಲು ಎಂದರೆ ಜನ ಭಯಪಡುತ್ತಾರೆ. ಆದರೆ ಕೆಲವು ಕಡೆ ಮೋಡ ಕವಿದ ವಾತಾವರಣದಿಂದಾಗಿ ಮಳೆ ಬಂದಿದ್ದರೂ ಕೂಡ ಬೆಂಗಳೂರು ನಗರದ ಉಷ್ಣಾಂಶ ಚೆನ್ನೈಗಿಂತ(33.6 ಡಿಗ್ರಿ ಸೆಲ್ಸಿಯಸ್) ಜಾಸ್ತಿಯಾಗಿತ್ತು.
ಮೋಡ ಮುಸುಕಿದ ವಾತಾವರಣದಿಂದಾಗಿ ಕನಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಿ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆ ಕಂಡುಬರುತ್ತದೆ. ಮುಂದಿನ ಕೆಲ ದಿನಗಳವರೆಗೆ ಇದೇ ರೀತಿಯ ವಾತಾವರಣ ಕಂಡುಬರಲಿದೆ ಎನ್ನುತ್ತಾರೆ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸುಂದರ್ ಮೇತ್ರಿ.
ದಕ್ಷಿಣ ಛತ್ತೀಸ್ ಗಢ ಕಡೆಯಿಂದ ಕೊಮೊರಿಯನ್ ಪ್ರದೇಶದ ಕಡೆಗೆ ವಾಯುಭಾರ ಕುಸಿತದ ವಿದ್ಯಮಾನ ಸಾಗುತ್ತಿದೆ. ಹೀಗಾಗಿ ತಮಿಳುನಾಡು ಮತ್ತು ರಾಯಲಸೀಮೆಯಲ್ಲಿ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಆದರೆ ಇದರ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಚೆನ್ನೈಗಿಂತ ಹೆಚ್ಚು ಬಿಸಿಲಿದೆ ಎನ್ನುತ್ತಾರೆ ಅವರು.