ಬೆಂಗಳೂರು: ಸತ್ತ ಮೊಸಳೆ ಹಿಡಿದುಕೊಂಡು ಬೆಂಗಳೂರಿನ ಬೀದಿ ಬೀದಿಗಳಲ್ಲಿ ತಿರುಗಾಡುತ್ತಿದ್ದವನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಆನಂದ್ ಎಂಬುವನನ್ನು ಪೊಲೀಸರ ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಮಂತ್ರಾಲಯದಿಂದ ಬಂದು ನಗರದ ಎಂ.ಜಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.
ಆನಂದ್ ಗೆ ದೊಡ್ಡ ನಗರಗಳಲ್ಲಿ ಮೊಸಳೆ ಯನ್ನು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಾರೆ ಎಂದು ಯಾರೋ ಹೇಳಿದ್ದರಂತೆ. ಅದರಂತೆ ಸುಮಾರು 1.5 ಮೀಟರ್ ಉದ್ದದ ಮೊಸಳೆ ಮರಿಯನ್ನು ಮಂತ್ರಾಲಯದಿಂದ ತಂದು ಕೊಳ್ಳುವವರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಮೊಸಳೆ ಮರಿ ಬದುಕಿದೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದವು. ಆದರೆ ಮರಿ ಸತ್ತು ಹೋಗಿತ್ತು ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಮೊಸಳೆ ಮಾರಾಟ ಮಾಡುವುದು ಅಕ್ರಮ ಎಂದು ಆತನಿಗೆ ತಿಳಿದಿರಲಿಲ್ಲ. ನಿರುದ್ಯೋಗಿಯಾಗಿದ್ದ ಆತ ಹಣದ ಆಸೆಗಾಗಿ ಮೊಸಳೆ ತಂದು ಮಾರಾಟಕ್ಕೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.