

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಸಿದ್ದರಾಮಯ್ಯ ಮತ್ತು ಅವರ ಸಂಭಾವ್ಯ ಉತ್ತರಾಧಿಕಾರಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ನವದೆಹಲಿಗೆ ಪ್ರತ್ಯೇಕವಾಗಿ ತೆರಳಿದರು.
ರಾಷ್ಟ್ರ ರಾಜಧಾನಿಯಲ್ಲಿ, ರಾಜ್ಯದ ಹೊಸ ಸಚಿವ ಸಂಪುಟ ರಚನೆ ವಿಧಾನಗಳ ಕುರಿತು ಚರ್ಚಿಸಲು ಇಬ್ಬರು ನಾಯಕರು ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಪಕ್ಷದ ಮೂಲಗಳ ಪ್ರಕಾರ, ಹೊಸ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ, ಸಚಿವಾಲಯದ ಸಂಯೋಜನೆ ಮತ್ತು ಶಿವಕುಮಾರ್ ಅವರು ಪ್ರಸ್ತುತ ಹೊಂದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಇತರ ಸಾಂಸ್ಥಿಕ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳು ದೆಹಲಿ ಭೇಟಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.
ಈ ವಿಷಯಗಳ ಬಗ್ಗೆ ಒಂದು ಅಥವಾ ಎರಡು ದಿನಗಳಲ್ಲಿ ಸ್ಪಷ್ಟತೆ ಹೊರಬರಬಹುದು. ಕಾಂಗ್ರೆಸ್ ಶಾಸಕಾಂಗ ಪಕ್ಷ ತನ್ನ ನಾಯಕನನ್ನು ಆಯ್ಕೆ ಮಾಡುತ್ತದೆ, ನಂತರ ಮುಖ್ಯಮಂತ್ರಿಯ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ ಲೋಕಭವನದಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ರಾಜೀನಾಮೆಯನ್ನು ಸ್ವೀಕರಿಸಿದರು.
ಇದಕ್ಕೂ ಮುನ್ನ, ತಮ್ಮ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳಿಗಾಗಿ ಆಯೋಜಿಸಿದ್ದ ಉಪಾಹಾರ ಸಭೆಯಲ್ಲಿ, ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಸಚಿವರಿಗೆ ತಿಳಿಸಿದರು ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಸಚಿವರು ತಿಳಿಸಿದ್ದಾರೆ.
ಆದಾಗ್ಯೂ, ನಂತರ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಕೇಳಿದಾಗ, ಸಿದ್ದರಾಮಯ್ಯ ಅವರು, "ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸುವ ಯಾರೇ ಆಗಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿದರು.
ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಕೇಳಿದಾಗ, ಅವರ ಸಹೋದರ ಮತ್ತು ಮಾಜಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, "ಪಕ್ಷದ ನಿರ್ಧಾರಕ್ಕಾಗಿ ಕಾಯೋಣ" ಎಂದಷ್ಟೇ ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡುವಂತೆ ಮತ್ತು ರಾಜ್ಯಸಭಾ ಸ್ಥಾನದ ಜೊತೆಗೆ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಪಾತ್ರವೊಂದನ್ನು ನೀಡುವ ಪ್ರಸ್ತಾಪವನ್ನು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕೇಳಿದ ನಂತರ ರಾಜೀನಾಮೆಗೆ ಕಾರಣವಾದ ಬೆಳವಣಿಗೆಗಳು ನಡೆದಿವೆ. ಆದಾಗ್ಯೂ ರಾಜ್ಯಸಭೆಯ ಆಫರ್ ನ್ನು ಸಿದ್ದರಾಮಯ್ಯ ಇದುವರೆಗೆ ಸ್ವೀಕರಿಸಿಲ್ಲ. ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಸಂದೇಶವನ್ನು ತಿಳಿಸಿದ ನಂತರ ಸಿದ್ದರಾಮಯ್ಯ ರಾಜೀನಾಮೆ ನೀಡಲು ನಿರ್ಧರಿಸಿದರು.
Advertisement