ಸ್ವಚ್ಛ್ ಶರೀರ ಅಭಿಯಾನ ಕೈಗೊಂಡ ಮೈಸೂರಿನ 10 ವರ್ಷದ ಬಾಲಕ ಅಭಿಗ್ಯ
ಮೈಸೂರು: ಸ್ವಚ್ಚ್ ಭಾರತ್ ಅಭಿಯಾನದ ಬಗ್ಗೆ ಕೇಳಿದ್ದೀರಿ, ಈ ಅಭಿಯಾನದಲ್ಲಿ ದೇಶದಲ್ಲೇ ನಂ.1 ಸ್ಥಾನ ಪಡೆದಿರುವ ಮೈಸೂರಿನಲ್ಲಿ ಮತ್ತೊಂದು ಅಭಿಯಾನ ಪ್ರಾರಂಭವಾಗಿದೆ. ಹೆಸರು ಸ್ವಚ್ಚ್ ಶರೀರ ಅಭಿಯಾನ, ಈ ಅಭಿಯಾನ ಪ್ರಾರಂಭ ಮಾಡಿರುವುದು 10 ವರ್ಷದ ಬಾಲಕ.
ದೇಹವನ್ನು ಸಾಧ್ಯವಾದಷ್ಟು ಅನಾರೋಗ್ಯದಿಂದ ದೂರ ಇಡಲು ಸಹಕಾರಿಯಾಗುವ ಆಹಾರ ಕ್ರಮಗಳ ಬಗ್ಗೆ 10 ವರ್ಷದ ಬಾಲಕ ಅಭಿಗ್ಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿದ್ದಾನೆ. ಈತ ಆಹಾರ ಕ್ರಮಗಳ ಬಗ್ಗೆ ಮಾತ್ರ ಜಾಗೃತಿ ಮೂಡಿಸುವುದರೊಂದಿಗೆ ಇನ್ನಿತರ ಚಟುವಟಿಕೆಗಳಲ್ಲೂ ಸಕ್ರಿಯನಾಗಿದ್ದಾನೆ. ಮೈಸೂರಿನ ಸರ್ಕಾರಿ ಶಾಲೆಯಲ್ಲಿ 6 ನೇ ತರಗತಿ ಓದುತ್ತಿರುವ ಅಭಿಗ್ಯ ಏಳನೇ ವಯಸ್ಸಿಗೇ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಕಂಠಪಾಠ ಮಾಡಿದ್ದಾನೆ. ತನ್ನ ಕೌಶಲ್ಯದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅಭಿಗ್ಯ, ಮೈಸೂರಿನ ಕಾಲೇಜುಗಳಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದು, ಭಾರತ ಹಾಗೂ ಜರ್ಮನಿಯ ಅನೇಕ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ್ದಾನೆ.
ಆರೋಗ್ಯಕರ ಜೀವನ ನಡೆಸಲು ದೇಹ ಆಂತರಿಕವಾಗಿ ಸ್ವಚ್ಛವಾಗಿರಬೇಕಾಗುತ್ತದೆ. ಆದ್ದರಿಂದ ದಿನಚರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಆಹಾರ ಕ್ರಮದ ಬಗ್ಗೆ ಅರಿವಿರಬೇಕು ಎನ್ನುತ್ತಾನೆ ಅಭಿಗ್ಯ. ಅಂದಹಾಗೆ ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಲು ಈತ ತೆಗೆದುಕೊಂಡ ಸಮಯ 7 ತಿಂಗಳು. ಆಸ್ಟ್ರೇಲಿಯಾದಲ್ಲಿದ್ದಾಗ ಅಲ್ಲಿನ ವಿದ್ಯಾರ್ಥಿ ಭಗವದ್ಗೀತೆಯಿಂದ ದಿನಕ್ಕೆ ಒಂದು ಶ್ಲೋಕವನ್ನು ಕಂಠಪಾಠ ಮಾಡುತ್ತಿದ್ದ, ಅದೇ ಅಭಿಗ್ಯನಿಗೆ ಭಗವದ್ಗೀತೆಯನ್ನು ಕಂಠಪಾಠ ಮಾಡಲು ಪ್ರೇರಣೆಯಾಯಿತಂತೆ.
ಶಾಲಾ ಪಠ್ಯದ ಜೊತೆಗೇ ಅಭಿಗ್ಯ, ಜ್ಯೋತಿಷ್ಯ ಶಾಸ್ತ್ರ, ಸಂಸ್ಕೃತವನ್ನು ಅಭ್ಯಾಸ ಮಾಡುತ್ತಿದ್ದು, ಆಯುರ್ವೇದ ಮೈಕ್ರೋಬಯಾಲಜಿ ವಿಷಯದಲ್ಲಿ ಡಿಪ್ಲಮೋ ಅಧ್ಯನ ಮಾಡುತ್ತಿದ್ದಾನೆ.