ರಾಜ್ಯ

ಅತಿಥಿ ಉಪನ್ಯಾಸಕರಿಂದ ನಾಳೆ ವಿಧಾನಸೌಧ ಚಲೋ ಚಳವಳಿ

Sumana Upadhyaya

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಾಳೆ(ಮಾರ್ಚ್ 24) ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಿದ್ದಾರೆ.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ  ಎನ್‌.ಶ್ರೀನಿವಾಸಾಚಾರ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸದೆ ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಂಡಿದ್ದು, ಅತಿಥಿ ಉಪನ್ಯಾಸಕರ ಕುಟುಂಬದ ಸದಸ್ಯರೂ ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಳೆದ ಫೆಬ್ರವರಿ 26 ರಂದು ಸಭೆ ಕರೆದಿದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬೇಡಿಕೆಗಳ ಕುರಿತು ಮಾರ್ಚ್ 5ರಂದು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಮುಖ್ಯಮಂತ್ರಿಯವರ ಗಮನಕ್ಕೆ ಈ ವಿಚಾರ ತಂದಿಲ್ಲ. ಇದೀಗ ಮಾ. 26ಕ್ಕೆ ಚರ್ಚಿಸುವುದಾಗಿ ಹೇಳುತ್ತಿದ್ದಾರೆ. ಹೀಗೆ ಕಾಲಹರಣ ಮಾಡುತ್ತಿರುವ ಕಾನೂನು ಸಚಿವರಿಂದ ಸಮಸ್ಯೆ ಬಗೆಹರಿಯುವುದು ಸಂಶಯವಿದೆ. ಆದ್ದರಿಂದ ನಾಳೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಮೂಲಸೌಕರ್ಯ ಒದಗಿಸಬೇಕು. ಈ ಹಿಂದೆ ಒಂದು ತಿಂಗಳು ನಡೆದ ಪ್ರತಿಭಟನೆಯಿಂದ ತರಗತಿಗಳಿಗೆ ಹಾಜರಾಗದ ಅತಿಥಿ ಉಪನ್ಯಾಸಕರು ಬಾಕಿ ಉಳಿದ ಪಠ್ಯವನ್ನು ಪೂರ್ಣಗೊಳಿಸುತ್ತಿದ್ದು, ಆ ತಿಂಗಳ ವೇತನ ಬಿಡುಗಡೆ ಮಾಡಬೇಕು. ವಯೋಮಿತಿ ಆಧಾರದಲ್ಲಿ ಸೇವಾ ಹಿರಿತನ ಕೊಡಬೇಕು ಎಂಬುದು ಅವರ ಬೇಡಿಕೆಯಾಗಿದೆ.

SCROLL FOR NEXT