ಬೆಂಗಳೂರು: ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿರುವುದರಿಂದ ಇನ್ನು ಮುಂದೆ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಲು ಬೆಂಗಳೂರಿಗೇ ಬರಬೇಕೆಂಬ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕಚೇರಿಗಳನ್ನು ಪ್ರಾರಂಭಿಸಿ ಅಲ್ಲಿಯೇ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲು ನಿರ್ಧರಿಸಿದೆ.
ಮಾ.24 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಬೆಂಗಳೂರಿನ ಖನಿಜ ಭವನದಲ್ಲಿ ಎಡಿಜಿಪಿ-ಎಸಿಬಿ ಕಚೇರಿಯನ್ನು ಪ್ರಾರಂಭಿಸುವುದಕ್ಕೆ ಹಾಗೂ ಪ್ರತಿ ಜಿಲ್ಲೆಯಲ್ಲೂ ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸಲು ಕಚೇರಿಗಳನ್ನು ಪ್ರಾರಂಭಿಸಲು ನಿರ್ಧಾರ ಕೈಗೊಂಡಿದೆ.
ಅಧಿಸೂಚನೆ ಮೂಲಕ ಎಸಿಬಿ ಕಚೇರಿಗಳಿಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಎಸಿಬಿ ಸ್ಥಾಪನೆ ಕುರಿತು ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ, ರಾಜ್ಯದ ಯಾವುದೇ ಮೂಲೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನ ಎಡಿಜಿಪಿ ಕಚೇರಿಯಲ್ಲೇ ದೂರು ದಾಖಲಿಸಬೇಕಾಗಿತ್ತು. ಇದರಿಂದ ಭ್ರಷ್ಟಾಚಾರದ ಬಲಿಪಶುಗಳಿಗೆ ಅನಾನುಕೂಲವಾಗುತ್ತಿತ್ತು.