ರಾಜ್ಯ

ಬರದ ಹಿನ್ನೆಲೆ: ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

Shilpa D

ಬೆಂಗಳೂರು: ರಾಜ್ಯದ 27 ಜಿಲ್ಲೆಗಳ 136 ಬರಪೀಡಿತ ತಾಲೂಕುಗಳಲ್ಲಿರುವ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳ ಒಂದನೇ ತರಗತಿಯಿಂದ ಎಂಟನೇ ತರಗತಿ ಮಕ್ಕಳಿಗೆ ಬೇಸಗೆ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.

ಬೇಸಿಗೆ ರಜಾ ಅವಧಿ ಎಪ್ರಿಲ್‌ 11ರಿಂದ ಮೇ 31ರವರೆಗೆ ಇದೆ. ಈ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಬರಪೀಡಿತ ತಾಲೂಕುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಬಿಸಿಯೂಟ ನೀಡುವ ವೇಳೆ ಸಿದ್ಧಪಡಿಸಿದ ಆಹಾರವು ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಈ ಬಗ್ಗೆ ಅನುಸರಿಸಬೇಕಾದ ನೀತಿ-ನಿಯಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದೆ.

ಭಾನುವಾರವೂ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲೂ ಬಿಸಿಯೂಟ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. 27 ಲಕ್ಷ ಮಕ್ಕಳು ಬಿಸಿಯೂಟದ ಪ್ರಯೋಜನ ಪಡೆಯಲಿದ್ದು ಇದಕ್ಕಾಗಿ 90 ಕೋಟಿ ರೂ. ಹಣ ಮೀಸಲಿಟ್ಟಿದೆ.

ಒಂದು ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಅಂತಹ ಶಾಲೆಗಳ ಪೈಕಿ ಹೆಚ್ಚು ಮಕ್ಕಳಿರುವ ಶಾಲೆಯನ್ನು ಈ ಅವಧಿಗೆ ಮಾತ್ರ ಕೇಂದ್ರ ಶಾಲೆ ಎಂದು ಗುರುತಿಸಬೇಕು. ಇತರ ಶಾಲೆಗಳ ಮುಖ್ಯ ಶಿಕ್ಷಕರು ಮಕ್ಕಳ ಪಟ್ಟಿಯನ್ನು ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರಿಗೆ ಕಡ್ಡಾಯವಾಗಿ ದೃಢೀಕರಿಸಿ ನೀಡಬೇಕು ಎಂದು ಹೇಳಿದೆ.

ಇನ್ನೂ ಮಧ್ಯಾಹ್ನದ ಬಿಸಿಯೂಟಕ್ಕೆ ಚಿತ್ರಾನ್ನ, ಉಪ್ಪಿಟ್ಟು, ಅನ್ನ-ಸಾರು, ಮೊಸರನ್ನ, ತರಕಾರಿ ಪಲಾವ್ ಮಾಡಿ ಮಕ್ಕಳಿಗೆ ನೀಡುವಂತೆ ಹೇಳಲಾಗಿದೆ.

SCROLL FOR NEXT