ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ (JU-CMS) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಸೋಮವಾರ ‘ಹಸಿರು ಬೆಂಗಳೂರಿ’ನ ಪ್ರಾಮುಖ್ಯತೆಯನ್ನು ಪ್ರಚುರಪಡಿಸಲು ‘ಐಕ್ಯತೆಗಾಗಿ ನಡಿ’ಗೆ ಯನ್ನು ಹಮ್ಮಿಕೊಂಡಿದ್ದರು.
ಸುಮಾರು 40 ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಲಾಲಬಾಗ್ ಪಶ್ಚಿಮ ಗೇಟ್ ನಿಂದ ಜೈನ್ ಸಿಎಂಎಸ್ (ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್) ಕ್ಯಾಂಪಸ್, ಪ್ಯಾಲೆಸ್ ರಸ್ತೆಯವರೆಗೂ ಜಾಥಾ ನಡೆಸಿದರು.
ಬೆಳಗ್ಗೆ 6.30ಕ್ಕೆ ಆರಂಭವಾದ ಈ ನಡಿಗೆಯು ಬೆಂಗಳೂರಿನಲ್ಲಿ ಹಸಿರು ಕಡಿಮೆಯಾಗುತ್ತಿರುವ ಬಗ್ಗೆ ಜನ-ಜಾಗೃತಿ ಮೂಡಿಸುವಂತಹ ಅನೇಕ ಘೋಷಣೆಗಳನ್ನು ಕೂಗುತ್ತಾ ಸಾಗಿತು. ಇದೇ ಸಮಯದಲ್ಲಿ ವಿದ್ಯಾರ್ಥಿಗಳು ಏಪ್ರಿಲ್ 1 ರಂದು ಜನರಿಗೆ ಉಚಿತವಾಗಿ ಕೊಡುವ ಸಸಿಗಳನ್ನು ಖರೀದಿಸುವುದಕ್ಕೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದರು.
ಜೆಯುಸಿಎಂಎಸ್(JU-CMS)ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ‘ಸಂಸ್ಕೃತಿ – ಕನಸಿಗೊಂದು ಮುನ್ನುಡಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏಪ್ರಿಲ್ 6 ರಂದು ಕುನ್ನಿಂಗಹ್ಯಾಮ್ ರಸ್ತೆಯಲ್ಲಿರುವ ಅಲಯಾನ್ಸ್ ಫ್ರಾಂಸ್ಯೆ ಡಿಯಲ್ಲಿ ಹಮ್ಮಿಕೊಂಡಿದ್ದಾರೆ. ಫೋಟೋಗ್ರಫಿ, ನೃತ್ಯ, ಸಂಗೀತ ಮತ್ತು ನಾಟಕಗಳ ಮೂಲಕ ಕಲಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಿಂದ ಸಂಗ್ರಹವಾಗುವ ಎಲ್ಲ ಹಣವು ಅನಾಥಾಶ್ರಮಕ್ಕೆ ಸೇರಲಿದೆ. ಅಂದು ಪರಿಸರವಾದಿ ‘ಸಾಲುಮರದ ತಿಮ್ಮಕ್ಕ’ರವರನ್ನು ಸನ್ಮಾನಿಸಲಾಗುವುದು.