ಬೆಂಗಳೂರು: ನಮ್ಮ ಮೆಟ್ರೋ ಸುರಂಗ ಮಾರ್ಗ ಉದ್ಘಾಟನೆಯಾದ ಮೂರು ದಿನಗಳಲ್ಲೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಮೆಟ್ರೊ ಸುರಂಗ ಮಾರ್ಗದಲ್ಲಿ ಸಂಚರಿಸುವ ಮೋಜು ಅನುಭವಿಸಲು ರಜಾ ದಿನವಾದ ಭಾನುವಾರ ಜನಪ್ರವಾಹವೇ ಹರಿದುಬಂತು. ಸುಮಾರು 1.20 ಲಕ್ಷ ಪ್ರಯಾಣಿಕರು ಮೆಟ್ರೊ ನಿಲ್ದಾಣಗಳಿಗೆ ಲಗ್ಗೆಯಿಟ್ಟರು.
‘ನಮ್ಮ ಮೆಟ್ರೊ’ ರೈಲು ಸಂಚಾರ ಸೇವೆ ಆರಂಭವಾದ ಬಳಿಕ ಒಂದೇ ದಿನದಲ್ಲಿ ಲಕ್ಷ ಜನ ಪ್ರಯಾಣಿಕರನ್ನು ಕಂಡಿದ್ದು ಇದೇ ಮೊದಲು. ಪ್ರತಿ ನಿಲ್ದಾಣದ ಟಿಕೆಟ್ ಕೌಂಟರ್‌ಗಳ ಮುಂದೆಯೂ ಉದ್ದನೆಯ ಸರದಿಗಳು ಇದ್ದವು.
ಮೆಟ್ರೊ ನಿಲ್ದಾಣಗಳ ಸಿಬ್ಬಂದಿ ಬೆಳಗಿನಿಂದ ರಾತ್ರಿವರೆಗೆ ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿದ್ದರು. ಹಳದಿ ಗೆರೆ ದಾಟದಂತೆ ಪದೇ ಪದೇ ಮಕ್ಕಳಿಗೆ ಹೇಳುತ್ತಿದ್ದರು. ಉದ್ಘಾಟನೆ ವೇಳೆ ಹಾಕಿದ್ದ ಬಲೂನ್ ಗಳನ್ನು ತೆಗೆದು ಕೊಳ್ಳಲು ಮಕ್ಕಳು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.
60 ಅಡಿ ಆಳದಲ್ಲಿ ನಿರ್ಮಿಸಲಾದ ಸುರಂಗದಲ್ಲಿ ರೈಲು ಶಿಳ್ಳೆ ಹಾಕುತ್ತಾ ಮುನ್ನುಗ್ಗುತ್ತಿದ್ದಂತೆ ಮೇಲಿನ ರಸ್ತೆಗಳಲ್ಲಿ ಉಂಟಾದ ದಟ್ಟಣೆಯಿಂದ ಪಾರಾದ ಖುಷಿಯಲ್ಲಿ ಪ್ರಯಾಣಿಕರು ತೇಲಿದರು. ಮೆಜೆಸ್ಟಿಕ್‌ನಿಂದ ಎಂ.ಜಿ. ರಸ್ತೆವರೆಗೆ ಸುರಂಗದಲ್ಲಿ ಪ್ರಯಾಣದ ಅನುಭವ ಪಡೆಯಲು ಭಾರಿ ದಟ್ಟಣೆ ಇತ್ತು.
ಭಾನುವಾರದ ಔಟಿಂಗ್ ಗೆ ಪ್ಲಾನ್ ಮಾಡಿದ್ದ ಕೆಜಿಎಫ್ ನಿಂದ ನಿವೃತ್ತ ನೌಕರ ತನ್ನ ಕುಟುಂಬದ 20 ಮಂದಿ ಸದಸ್ಯರೊಂದಿಗೆ ಬಂದು ಸುರಂಗ ಮೆಟ್ರೊದಲ್ಲಿ ಸಂಚರಿಸಿ ಖುಷಿ ಅನುಭವಿಸಿದರು.
ಎಂರಡು ಕಡೆಯ ಪ್ರಯಾಣದಲ್ಲೂ ಜನಜಂಗುಳಿಯಿತ್ತು. ಸೋಮೇಶ್ವರ ದೇವರ ಹಬ್ಬ ಇದ್ದುದ್ದರಿಂದ ಹಲಸೂರಿಗೆ ಹೆಚ್ಚಿನ ಪ್ರಮಾಣದ ಜನರು ಮೆಟ್ರೋದಲ್ಲಿ ಸಂಚರಿಸಿದರು.
ಇನ್ನು ಪ್ರತಿದಿನ ಇಂದಿರಾನಗರದಿಂದ ವಿಶ್ವೆಶ್ವರಯ್ಯ ಮ್ಯೂಸಿಯಂಗೆ ಬರಲು 45 ನಿಮಿಷ ಸಮಯ ಬೇಕಾಗಿತ್ತು, ಆದರೆ ಇನ್ಮುಂದೆ 15 ನಿಮಿಷಗಳಲ್ಲ ಟ್ರಾಫಿಕ್ ಕಿರಿಕಿರಿಯಿಲ್ಲದೇ ಎಸಿಯಲ್ಲಿ ಆರಾಮವಾಗಿ ಕಚೇರಿಗೆ ಬರಬಹುದು ಎಂದು ಇಂದಿರಾನಗರ ನಿವಾಸಿ ರಾಯಪ್ಪ ಪ್ರವೀಣ್ ಅಭಿಪ್ರಾಯ ಪಟ್ಟರು.
ಒಟ್ಟಿನಲ್ಲಿ ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೆಟ್ರೋ ಸುರಂಗ ಮಾರ್ಗಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸಾವಿರಾರು ಮಂದಿ ಮೆಟ್ರೋದಲ್ಲಿ ಸಂಚರಿಸಿ ಸಂತಸ ಅನುಭವಿಸಿದರು.