ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಡಿಸೇಲ್ ಬಸ್ ಗಳನ್ನು ಖರೀದಿಸುವುದಕ್ಕೂ ಮುನ್ನ ಹೈಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾ.ಆನಂದ್ ಭೈರಾರೆಡ್ಡಿ ಹಾಗೂ ನ್ಯಾ. ರವಿ ಮಾಲಿಮಠ್ ಅವರಿದ್ದ ರಜೆ ಕಾಲದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದ್ದು, ಹೊಸ ಡಿಸೇಲ್ ಬಸ್ ಖರೀದಿಗೂ ಮುನ್ನ ಕೋರ್ಟ್ ನಿಂದ ಅನುಮತಿ ಪಡೆಯಬೇಕು ಎಂದು ಹೇಳಿದೆ. ಬೆಂಗಳೂರು ನಗರದಲ್ಲಿ ಅಥವಾ ನಗರದ ಮೂಲಕ ಸಂಚರಿಸುವ ಖಾಸಗಿ, ಬಿಎಂಟಿಸಿ ಬಸ್ ಗಳ ಇಂಧನವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಿಎನ್ ಜಿ ಅಥವಾ ಎಲ್ ಪಿಜಿ ಗೆ ಬದಲಾವಣೆಗೊಳಿಸಲು ಆದೇಶ ನೀಡಬೇಕೆಂದು ಕೋರಿ ವಕೀಲ ವಿನಯ್ ಶಿವಾನಂದ್ ನಾಯಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ವೇಳೆ ಮಧ್ಯಂತರ ಆದೇಶ ನೀಡಿರುವ ವಿಭಾಗೀಯ ಪೀಠ, ಹೈಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಿಎಂಟಿಸಿ ಹೊಸ ಡಿಸೇಲ್ ಬಸ್ ಗಳನ್ನು ಖರೀದಿಸುವಂತಿಲ್ಲ ಎಂದು ಹೇಳಿದೆ. ಅಲ್ಲದೇ ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆಯೂ ತಿಳಿಸಿದೆ. ಬಿಎಂಟಿಸಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದು ಹಲವು ಬಿಎಂಟಿಸಿ ಬಸ್ ಗಳು ಹಳೆಯದಾಗಿದ್ದು ಅವುಗಳನ್ನು ಬದಲಾವಣೆ ಮಾಡಲೇ ಬೇಕಾಗಿದೆ. ಆದರೆ ಬಸ್ ಗಳ ಇಂಧನವನ್ನು ಸಿಎನ್ ಜಿ ಗೆ ಬದಲಾವಣೆ ಮಾಡಲು ಔಟ್ ಲೆಟ್ ಗಳು ಕಡಿಮೆ ಇದೆ ಎಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜೂ ಗೆ ಮುಂದೂಡಿದೆ.