ಬೆಂಗಳೂರು: ಜೈಲಿನಲ್ಲಿ ಪರಿಚಯವಾಗಿದ್ದ ಸಹಕೈದಿ ಸ್ನೇಹಿತನ ಮನೆಗೆ ನುಗ್ಗಿ ಆತನ ಪತ್ನಿ ಮೇಲೆ ಮೂರು ದಿನ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಿದ್ದಾಪುರ ಪೊಲೀಸರು ಆಟೋ ಚಾಲಕನೋರ್ವನನ್ನು ಬಂಧಿಸಿದ್ದಾರೆ.
ಸಿದ್ದಾಪುರ ಸಮೀಪದ ಸೋಮೇಶ್ವರನಗರ 10ನೇ ಕ್ರಾಸ್ ನಿವಾಸಿಯಾದ ಸೈಯದ್ ಸಲ್ಮಾನ್(38) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ತನ್ನ ಮನೆಯ ಪಕ್ಕದ ರಸ್ತೆಯಲ್ಲಿ ವಾಸವಾಗಿದ್ದ ಸ್ನೇಹಿತನ ಮನೆಗೆ ಮೇ 1ರಂದು ನುಗ್ಗಿ ಆತನ ಪತ್ನಿಗೆ ಬೆದರಿಸಿ ಗೃಹಬಂಧನದಲ್ಲಿಟ್ಟು ನಿರಂತರ ಅತ್ಯಾಚಾರ ಎಸಗಿದ್ದ. ಬಳಿಕ ಆತನಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತ ಮಹಿಳೆ ಪೊಲೀಸರಲ್ಲಿ ಈ ಬಗ್ಗೆ ದೂರು ನೀಡಿದ್ದು, ಆಕೆ ಕೊಟ್ಟ ದೂರು ಆಧರಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
5 ವರ್ಷದ ಹಿಂದೆ ಕೊಲೆ ಯತ್ನ ಮತ್ತು ಸುಲಿಗೆ ಪ್ರಕರಣದಲ್ಲಿ ಸೈಯದ್ ಸಲ್ಮಾನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಈ ವೇಳೆ ಅದೇ ಜೈಲಿನಲ್ಲಿ ಸಂತ್ರಸ್ತೆಯ ಪತಿ ವಿಲ್ಸನ್ಗಾರ್ಡನ್ನಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಲ್ಲೇ ಸೈಯದ್ ಮತ್ತು ಸಂತ್ರಸ್ತೆಯ ಪತಿಗೆ ಸ್ನೇಹ ಬೆಳೆದಿತ್ತು. ಪತಿಯನ್ನು ನೋಡಲು ಜೈಲಿಗೆ ಬರುತ್ತಿದ್ದ ಪತ್ನಿಯನ್ನು ಸೈಯದ್ ಗೆ ಪರಿಚಯಿಸಿದ್ದ. 3 ವರ್ಷಗಳ ಹಿಂದೆ ಸೈಯದ್ ಜೈಲಿನಿಂದ ಬಿಡುಗಡೆಯಾಗಿ ಆಟೋ ಓಡಿಸುತ್ತಿದ್ದ. ಆಗಾಗ ಸ್ನೇಹಿತನ ಮನೆಗೆ ಹೋಗಿ ಆತನ ಪತ್ನಿಯನ್ನು ಮಾತನಾಡಿಸುತ್ತಿದ್ದ.
ಆದರೆ ಕಳೆದ ಮೇ 1ರಂದು ಸಾಮಾನ್ಯದಂತೆಯೇ ಸ್ನೇಹಿತ ಮನೆಗೆ ಹೋಗಿದ್ದ ಸೈಯ್ಯದ್ ಸ್ನೇಹಿತನ ಪತ್ನಿಗೆ ಜೀವ ಬೆದರಿಕೆ ಒಡ್ಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.