ಬೆಂಗಳೂರು: ಇಂದು ನೀವು ಬೆಂಗಳೂರಿನ ರಸ್ತೆಯಲ್ಲಿ ನಡೆದುಕೊಂಡು ಅಥವಾ ವಾಹನದಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಸುಟ್ಟು ಹಾಕಿರುವ ಬಸ್ಸುಗಳ ಮೆರವಣಿಗೆ ನಿಮ್ಮ ಕಣ್ಣಿಗೆ ಬೀಳಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ''ಮೈ ಬಸ್ ಅಭಿಯಾನ'' ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಂಡಿದೆ. ಪ್ರತಿಭಟನೆ ಸಂದರ್ಭದಲ್ಲಿ ಬಸ್ಸುಗಳಿಗೆ ಯಾವ ರೀತಿ ಹಾನಿಯಾಗುತ್ತದೆ ಎಂದು ನಾಗರಿಕರಲ್ಲಿ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಂಡಿದೆ.
ಇದರ ಹಿಂದಿನ ರೂವಾರಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ. ಕಳೆದ ಸಲ ನಗರದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರ ಮುಷ್ಕರವಾದಾಗ ಸುಮಾರು 150 ಬಸ್ಸುಗಳಿಗೆ ಹಾನಿಯಾಗಿತ್ತು ಮತ್ತು 8 ಬಸ್ಸುಗಳನ್ನು ಸುಟ್ಟು ಹಾಕಲಾಗಿತ್ತು. ಹೀಗೆ ಹಾನಿಗೀಡಾದ ಬಸ್ಸುಗಳನ್ನು ಇಲಾಖೆಯೇ ದುರಸ್ತಿಗೊಳಿಸುತ್ತದೆ ಮತ್ತು ಅಗತ್ಯವೆನಿಸಿದರೆ ಬದಲು ಬಸ್ಸುಗಳನ್ನು ಬಿಡುತ್ತದೆ. ಆದರೆ ಈ ಬಾರಿ ನಾಗರಿಕರ ಕರ್ತವ್ಯವನ್ನು ನೆನಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಸಂವಿಧಾನ ನಮಗೆ ಪ್ರತಿಭಟನೆ ಮಾಡುವ ಹಕ್ಕಿನ ಜೊತೆಗೆ ಕರ್ತವ್ಯವನ್ನೂ ತಿಳಿಸಿದೆ. ಸಾರ್ವಜನಿಕ ಹಣದಿಂದ ಬಸ್ಸನ್ನು ಖರೀದಿಸಲಾಗುತ್ತದೆ. ಇದು ಸಾರ್ವಜನಿಕ ಸ್ವತ್ತಾಗಿದ್ದು, ಅದನ್ನು ಕಾಪಾಡುವಂತೆ ಜನರಿಗೆ ನೆನಪಿಸುತ್ತೇವೆ. ಮೆರವಣಿಗೆ ಸಂದರ್ಭದಲ್ಲಿ ಬಸ್ಸಿನ ತಪ್ಪು ಏನಿದೆ, ಯಾಕೆ ಪ್ರತಿಭಟನೆ ವೇಳೆ ಅದಕ್ಕೆ ಹಾನಿ ಮಾಡಲಾಗುತ್ತದೆ ಎಂದು ಜನರ ಬಳಿ ಕೇಳುತ್ತೇವೆ ಎನ್ನುತ್ತಾರೆ ಕಟಾರಿಯಾ.
ಸುಟ್ಟು ಹೋದ ಬಸ್ಸುಗಳನ್ನು ಬೆಂಗಳೂರಿನ ಕೆಂಪೇಗೌಡ ಮತ್ತು ಮೈಸೂರು ಬಸ್ ನಿಲ್ದಾಣಗಳಲ್ಲಿ ಪ್ರದರ್ಶನಕ್ಕಿಡಲಾಗುವುದು. ಅವುಗಳು ದುರಸ್ತಿಗೊಳಿಸಲಾರದಷ್ಟು ಕೆಟ್ಟು ಹೋಗಿವೆ. ಅಭಿಯಾನದಲ್ಲಿ ಬಸ್ಸುಗಳಿಗೆ ಇನ್ನು ಮುಂದೆ ಹಾನಿ ಮಾಡುವುದಿಲ್ಲವೆಂದು ಸಹಿ ಮತ್ತು ಪ್ರತಿಜ್ಞೆ ಹಾಕಿಸಿಕೊಳ್ಳಲಾಗುವುದು. ಹಾನಿಗೀಡಾದ, ಸುಟ್ಟುಹೋದ ಬಸ್ಸುಗಳನ್ನು ಪೀಣ್ಯ ಬಸ್ ನಿಲ್ದಾಣದಿಂದ ನಗರದಾದ್ಯಂತ ಸಂಚರಿಸಲಾಗುವುದು. ಟ್ರಾಫಿಕ್ ಜಾಮ್ ಗೆ ತೊಂದರೆ ನೀಡುವುದಿಲ್ಲ. ಪೋಸ್ಟರ್ ಗಳನ್ನು ಹಚ್ಚಲಾಗುವುದು, ಬಸ್ಸುಗಳಲ್ಲಿ ಅಲ್ಲಲ್ಲಿ ರಿಪ್ ಎಂದು ಬರೆಯಲಾಗುವುದು. ಅಭಿಯಾನ ಇಂದು ಬೆಳಗ್ಗೆ 11.30ಕ್ಕೆ ಆರಂಭಗೊಳ್ಳಲಿದೆ.