ಹುಬ್ಬಳ್ಳಿ: ಅನಾಮಧೇಯ ವ್ಯಕ್ತಿಯೊಬ್ಬ ಹುಬ್ಬಳ್ಳಿ ರೇಲ್ವೆ ಅಧಿಕಾರಿಗಳಿಗೆ ಕರೆ ಮಾಡಿ ಮೈಸೂರು-ಅಜ್ಮೇರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಇದೆ ಎಂದು ಹೇಳಿದ್ದು, ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ರೈಲನ್ನು ಬೆಳಗಾವಿಯ ದೇಸೂರು ಬಳಿ ನಿಲ್ಲಿಸಿ ತಪಾಸಣೆ ನಡೆಸಲಾಗುತ್ತಿದೆ.
ಮೈಸೂರಿನಿಂದ ಅಜ್ಮೇರ್ ಕಡೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಇದೆಯೆಂದು ಹುಬ್ಬಳ್ಳಿಯ ರೈಲ್ವೇ ಅಧಿಕಾರಿಗಳಿಗೆ ಕರೆಬಂದಿದೆ. ಮುಂಬೈಯಿಂದ ಈ ಕರೆ ಬಂದಿದೆ. ಇದರಿಂದ ಗಾಬರಿಕೊಂಡ ಪ್ರಯಾಣಿಕರು ಹಾಗೂ ಅಧಿಕಾರಿಗಳು ಬೆಳಗಾವಿಯ ದೇಸೂರು ಬಳಿ ರೈಲನ್ನು ನಿಲುಗಡೆ ಮಾಡಿ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ರೈಲಿನ ತಪಾಸಣೆ ನಡೆಸಲಾಗುತ್ತಿದೆ. ಆದರೆ ಬಾಂಬ್ ಇರುವ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.