ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ಬಿಜೆಪಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದ್ದರ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಆಸ್ತಿ ತೆರಿಗೆ ಹೆಚ್ಚಳ ನಿರ್ಧಾರ ವಾಪಸು ಪಡೆಯುವ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ಕೆಳ ಮತ್ತು ಮಧ್ಯಮ ವರ್ಗದ ಜನತೆಗೆ ತೆರಿಗೆ ಹೆಚ್ಚಳ ಮಾರಕವಾಗಿದ್ದು, ಕೂಡಲೇ ಆಸ್ತಿ ತೆರಿಗೆಯನ್ನು ರದ್ದುಪಡಿಸಬೇಕೆಂದು ಪ್ರತಿಪಕ್ಷದ ಬಿಜೆಪಿ ಸದಸ್ಯರು ಆಗ್ರಹಪಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆ ಕೆಲ ಕಾಲ ಗೊಂದಲ, ಕೋಲಾಹಲದಲ್ಲಿ ಮುಳುಗಿತ್ತು.
ತೆರಿಗೆ ಹೆಚ್ಚಳವನ್ನು ವಾಪಸ್ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರಡ್ಡಿ ಎಚ್ಚರಿಸಿದರು. ಆದರೆ ಇದಕ್ಕೆ ಜಗ್ಗದ ಮೇಯರ್ ಮಂಜುನಾಥ್ ರೆಡ್ಡಿ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ನಿರ್ಧಾರ ಇದು, ನಿಮ್ಮ ಕಾಲದ ಕೂಸು ಇದು ಎಂದು ತಿರುಗೇಟು ನೀಡಿದರು.