ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯತೆ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಬೇಬಿ ಕೇರ್ ಸೆಂಟರ್ ಗಳಿಗೆ ಬಿಡುವುದು ಸಾಮಾನ್ಯ. ಆದರೆ ಈ ಸ್ಥಳದಲ್ಲಿ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಅನುಮಾನಿಸಬೇಕಾದ ಘಟನೆ ಗುರುವಾರ ನಡೆದಿದೆ.
ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೇಬಿ ಕೇರ್ ಸೆಂಟರ್ ವೊಂದರ ಮಾಲೀಕ ಚಂದುನನ್ನು ಶುಕ್ರವಾರ ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಮಗುವನ್ನು ಬೇಬಿ ಕೇರ್ ಸೆಂಟರ್ ಗೆ ಬಿಟ್ಟು ಸಂಜೆ ಮನಗೆ ವಾಪಾಸ್ ಕರೆದೊಯ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.
ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ದೂರಿನನ್ವಯ ಬೇಬಿ ಕೇರ್ ಮಾಲಿಕ ಚಂದು ಎಂಬಾತನನ್ನು ಬಂಧಿಸಿದ್ದಾರೆ.