ಬೆಂಗಳೂರು: ಪದವಿಪೂರ್ವ ಕಾಲೇಜುಗಳು ನೀಡುವ ಸಮಗ್ರ ತರಬೇತಿಯನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅನೇಕ ಕಾಲೇಜುಗಳು ಪ್ರವೇಶ ಪರೀಕ್ಷೆಗೆ ತರಬೇತಿಗಳನ್ನು ಸಾಮಾನ್ಯ ತರಗತಿಗಳ ಜೊತೆಗೆ ನೀಡಲು ಮುಂದಾಗಿವೆ.
ಸಮಗ್ರ ತರಬೇತಿ ಹೆಸರಿನಲ್ಲಿ ಖಾಸಗಿ ಕಾಲೇಜುಗಳು ಅತಿಯಾದ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಪೋಷಕರಿಂದ ಹರಿದುಬರುತ್ತಿರುವ ಸಾವಿರಾರು ದೂರುಗಳನ್ನು ಸ್ವೀಕರಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಾಲೇಜುಗಳು ಇನ್ನು ಮುಂದೆ ಸಾಮಾನ್ಯ ತರಗತಿಗಳ ಜೊತೆ ಸಿಇಟಿ, ಎಐಇಇ, ಜೆಇಇ, ಸಿಎ, ಸಿಪಿಟಿಗಳಿಗೆ ಕೋಚಿಂಗ್ ನ್ನು ನೀಡಿದರೆ ಸರ್ಕಾರದ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಕೋಚಿಂಗ್ ಕೇಂದ್ರಗಳು ಪದವಿಪೂರ್ವ ಶಿಕ್ಷಣ ಕಾಲೇಜು ಆವರಣಕ್ಕೆ ಸಮಗ್ರ ತರಬೇತಿ ಹೆಸರಿನಲ್ಲಿ ಕಾಲಿರಿಸಿವೆ. ಅವು ಕಾಲೇಜು ಅವಧಿಯ ಮೊದಲು ಮತ್ತು ನಂತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತವೆ.
ಕೆಲವು ಕಾಲೇಜುಗಳು ಕೋಚಿಂಗ್ ನ್ನು ಆಯ್ಕೆಯನ್ನಾಗಿ ನೀಡುತ್ತಿವೆ. ಆದರೆ ಹೆಚ್ಚಿನ ಕಾಲೇಜುಗಳು ಕೋಚಿಂಗ್ ಗೆ ಸೇರುವುದನ್ನು ಕಡ್ಡಾಯ ಮಾಡಿ ಭಾರೀ ಶುಲ್ಕ ಕೀಳುತ್ತವೆ ಎಂಬುದು ವಿದ್ಯಾರ್ಥಿಗಳ ಮತ್ತು ಪೋಷಕರ ಅಳಲು.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬೆಂಗಳೂರಿನ ಪ್ರಮುಖ ಕೆಲವು ಕಾಲೇಜುಗಳನ್ನು ಸಂಪರ್ಕಿಸಿದಾಗ ಅವು ಎಂದಿನಂತೆ ನಿಮಗೆ ಸಿಇಟಿ ಅಥವಾ ಐಐಟಿ ಕೋಚಿಂಗ್ ಬೇಕೆ ಎಂದು ಕೇಳುತ್ತಾರೆ. ಅಲ್ಲ ಕೇವಲ ಪಿಯುಸಿ ಪ್ರವೇಶಾವಕಾಶ ಸಾಕು ಎಂದರೆ ಅವರಿಂದ ಬಂದ ಉತ್ತರ ನಮ್ಮಲ್ಲಿ ಅಂತಹ ಆಯ್ಕೆಗಳಿಲ್ಲ ಎಂಬ ಉತ್ತರ ಬಂತು.
ಕೆಲವು ಖಾಸಗಿ ತರಬೇತಿ ಕೇಂದ್ರಗಳು ಪದವಿಪೂರ್ವ ಕಾಲೇಜುಗಳ ಜೊತೆ ಸೇರಿ ವ್ಯವಹಾರ ಕುದುರಿಸಿಕೊಳ್ಳುತ್ತವೆ. ಕಾಲೇಜುಗಳ ಜೊತೆ ಸೇರಿಕೊಳ್ಳುವುದರಿಂದ ಅವರು ತರಬೇತಿ ಕೇಂದ್ರಕ್ಕೆ ಪ್ರತ್ಯೇಕವಾಗಿ ಪ್ರಚಾರ ಮಾಡಬೇಕೆಂದಿಲ್ಲ.
ಆಂಧ್ರಪ್ರದೇಶ, ರಾಜಸ್ತಾನ ಮೂಲದ ಕೋಚಿಂಗ್ ಸೆಂಟರ್ ಗಳು ಈ ರೀತಿ ರಾಜ್ಯವನ್ನು ಪ್ರವೇಶಿಸುತ್ತಿವೆ. ಕಾಲೇಜುಗಳು ಕೋಚಿಂಗ್ ಸೆಂಟರ್ ಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಡುತ್ತಾರೆ ಜೊತೆಗೆ ಸ್ಥಳಾವಕಾಶವನ್ನು ನೀಡುತ್ತವೆ. ಕೆಲವು ಪಿ.ಯು ಕಾಲೇಜುಗಳು ಕೋಚಿಂಗ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಶೇಕಡಾ 75ರಷ್ಟು ಹಾಜರಾತಿಯನ್ನು ಕೂಡ ನೀಡುತ್ತವೆ. ಸಮಗ್ರ ತರಬೇತಿ ನೀಡುವ ಕಾಲೇಜುಗಳು ಇತರ ಕಾಲೇಜುಗಳಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಶುಲ್ಕ ತೆಗೆದುಕೊಳ್ಳುತ್ತವೆ. ಪದವಿಪೂರ್ವ ಶಿಕ್ಷಣ ಇಲಾಖೆ ಇಂತಹ ಕಾಲೇಜುಗಳಿಗೆ ಮುಂದಿನ ವಾರಗಳಲ್ಲಿ ಹಠಾತ್ ದಾಳಿ ನಡೆಸಲು ಯೋಚಿಸಿದೆ.