ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಭದ್ರಾವತಿಯ ಬಿ ಎಸ್ ರಂಜನ್ ಅವರ ಉತ್ತರ ಪತ್ರಿಕೆಯನ್ನು ನೋಡಲು ವಿದ್ಯಾರ್ಥಿಗಳು, ಪೋಷಕರು ಉತ್ಸಾಹಿಗಳಾಗಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭದ್ರಾವತಿಯಲ್ಲಿರುವ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ರಂಜನ್ 625ಕ್ಕೆ 625 ಅಂಕಗಳನ್ನು ಗಳಿಸಿ ಟಾಪರ್ ಎಂದೆನಿಸಿಕೊಂಡು ದಾಖಲೆ ಬರೆದಿದ್ದಾರೆ. ರಂಜನ್ ಉತ್ತರ ಪ್ರತ್ರಿಕೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ ಎಂದು ಎಂಇಎಸ್ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿ ಅಜಿತ್ ನಾಡಿಗ್ ಪ್ರಾಥಮಿಕ ಶಿಕ್ಷಣ ಸಚಿವರಿಗೆ ವಾಟ್ಸಾಪ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ರಂಜನ್ ಉತ್ತರ ಪತ್ರಿಕೆ ಮಾದರಿಯಾಗಲಿದೆ. ಹಾಗಾಗಿ, ಪಾಥಮಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಆತನ ಉತ್ತರ ಪತ್ರಿಕೆ ಪ್ರಕಟಿಸಿ ಎಂದು ಮನವಿ ಮಾಡಿದ್ದಾರೆ.
ಉತ್ತರ ಪತ್ರಿಕೆಯ ಪ್ರತಿಯನ್ನು ಎಲ್ಲಾ ಪ್ರೌಢಶಾಲೆಗಳಿಗೆ ಕಳುಹಿಸಿ ಎಂದು ಕೋರಿದ್ದಾನೆ. ವಿದ್ಯಾರ್ಥಿಯ ಮನವಿಯನ್ನು ನೋಡಿದ ಸಚಿವ ಕಿಮ್ಮನೆ ರತ್ನಾಕರ್ ವಿದ್ಯಾರ್ಥಿಗೆ ಕರೆ ಮಾಡಿ, ಸಂದೇಶದ ಮೂಲಕ ಬಂದ ಮನವಿಯನ್ನು ನಾನು ನೋಡಿದ್ದೇನೆ. ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.