ಬಳ್ಳಾರಿ: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಅಡಿ ವಿಚಾರಣೆ ಎದುರಿಸುತ್ತಿರುವ ಜಿ.ಜನಾರ್ದನರೆಡ್ಡಿ, ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಮಂಗಳವಾರ ಸಂಜೆ ಬಳ್ಳಾರಿಗೆ ಬಂದಾಗ ಅವರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ರೆಡ್ಡಿ ಬರುವ ದಾರಿಯುದ್ದಕ್ಕೂ ಪಟಾಕಿ, ಬಾಣ ಬಿರುಸುಗಳು ವಿಜೃಂಭಿಸಿದವು. ಪಟಾಕಿ ಶಬ್ದಗಳನ್ನು ತಾಳಲಾಗದೆ ಹಲವು ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಿದರು.ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಆಗದೆ ವಾಹನಗಳನ್ನು ತಡೆಯುವತ್ತ ಮಾತ್ರ ತಮ್ಮ ಗಮನ ಹರಿಸಿದ್ದರು.
ನಗರದ ಗಡಿಗಿ ಚೆನ್ನಪ್ಪ ವೃತ್ತ, ಕನಕದುರ್ಗಮ್ಮ ಗುಡಿ ವೃತ್ತ ಮತ್ತು ಬಿಜೆಪಿ ಜಿಲ್ಲಾ ಘಟಕದ ಕಚೇರಿ ಇರುವ ಎಸ್ಪಿ ವೃತ್ತದಲ್ಲಿ ಪೊಲೀಸರು ವಾಹನ ಸಂಚಾರವನ್ನು ಬಂದ್ ಮಾಡಿದ್ದರು. ಚೆನ್ನಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣ ದೀಪಗಳನ್ನು ಆರಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸಿದರು.
ಸಂಸದ ಬಿ.ಶ್ರೀರಾಮುಲು, ಕಂಪ್ಲಿ ಶಾಸಕ ಟಿ.ಎಚ್.ಸುರೇಶ್‌ಬಾಬು, ರೆಡ್ಡಿ ಸಂಬಂಧಿ ಜಿ.ಸೋಮಶೇಖರರೆಡ್ಡಿ ಮೆರವಣಿಗೆಯಲ್ಲಿ ರೆಡ್ಡಿ ಜೊತೆಗಿದ್ದರು.