ಚಾಮರಾಜನಗರ: ಮಳೆ ಬೆಳೆ ಇಲ್ಲದೆ ಅನಾವೃಷ್ಟಿಯಿಂದ ನಲುಗುತ್ತಿರುವ ರೈತರು ಒಣಗಿ ನಿಂತಿರುವ ಬೆಳೆ ಮುಂದೆ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಗುರುವಾರ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಎಸ್.ಎಮ್ ಕೋಲಾಟ್ಕರ್, ಸತೀಶ್ ಕುಮಾರ್, ಕಾಂಬೋಜ್, ಹಾಗೂ ಎಸ್ ಸಿ ಮೀನಾ ಅವರನ್ನೊಳಗೊಂಡ ತಂಡ ಜಿಲ್ಲೆಯ ಸತ್ತೇಗಾಲ, ಕಟ್ನಾವಾಡಿ, ಮೆಳ್ಳಹಳ್ಳಿ ಸೇರಿದಂತೆ ಸುಮಾರು 12 ಕ್ಕೂ ಹೆಚ್ಚಿನ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಿತು.
ಬತ್ತಿದ ಕಾಲುವೆ, ಒಣಗಿ ನಿಂತ ಬೆಳೆಗಳನ್ನು ಬರ ಅಧ್ಯಯನ ತಂಡಕ್ಕೆ ರೈತರು ತೋರಿಸಿದರು.ನೀರಿಲ್ಲದ ಕಾರಣ ಯಾವ ಬೆಳೆಯನ್ನು ಬೆಳೆಯದೇ ಖಾಲಿ ಬಿಟ್ಟ ತಮ್ಮ ಜಮೀನುಗಳನ್ನು ರೈತರು ತಂಡಕ್ಕೆ ತೋರಿಸಿದರು.
ಜಾನುವಾರುಗಳಿಗೆ ಇರುವ ನೀರಿನ ಪ್ರಮಾಣದ ಬಗ್ಗೆ ಉಪ ಆಯುಕ್ತ ಬಿ.ರಾಮು ತಂಡಕ್ಕೆ ವಿವರಿಸಿದರು. ಕುಡಿಯುವ ನೀರಿನ ಬಗ್ಗೆ ತಂಡ ವಿವರಣೆ ಪಡೆದುಕೊಂಡಿತು. ಇನ್ನೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸರಿಯಾಗಿ ಅನುಷ್ಠಾನ ವಾಗದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಕೇಂದ್ರ ಬರ ಅಧ್ಯಯನ ತಂಡ ಯೋಜನೆಗೆ ಹೆಚ್ಚಿನ ರೈತರನ್ನು ಎನ್ ರೋಲ್ ಮಾಡುವಂತೆ ಸೂಚಿಸಿದೆ.