ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ನಿಷೇಧಕ್ಕೆ ಒಳಗಾಗಿರುವ ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳ ಚಲಾವಣೆ ಕಾಲಾವಧಿಯನ್ನು ಕೇಂದ್ರ ಸರ್ಕಾರ ಮತ್ತೆ 10 ದಿನಕ್ಕೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ ಸಂಸ್ಥೆ, ಪೆಟ್ರೋಲ್ ಬಂಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ನೋಟುಗಳ ಚಲಾವಣೆ ಕಾಲಾವಧಿಯನ್ನು ಮತ್ತೆ 10 ದಿನಗಳ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನೋಟು ರದ್ಧತಿ ಘೋಷಣೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 14ರ ವರೆಗೂ ಹಳೆಯ ನೋಟುಗಳನ್ನು ಸರ್ಕಾರಿ ಸಂಸ್ಥೆಗಳಸಲ್ಲಿ ಬಳಕೆ ಮಾಡಬಹುದು ಎಂದು ಹೇಳಿದ್ದರು. ಅದರಂತೆ ಇಂದಿಗೆ ಹಳೆಯ ನೋಟುಗಳ ಚಲಾವಣೆ ಅಂತ್ಯವಾಗಬೇಕಿತ್ತು. ಆದರೆ ಹಳೆಯ ನೋಟುಗಳ ಚಲಾವಣೆಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸುವಂತೆ ದೇಶಾದ್ಯಂತ ವ್ಯಾಪಕ ಮನವಿಗಳ ಕೇಳಿಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮತ್ತೆ ಈ ಕಾಲಾವಧಿಯನ್ನು ನವೆಂಬರ್ 24ರವರೆಗೂ ವಿಸ್ತರಿಸಿದೆ.
ಆ ಮೂಲಕ ಮತ್ತೆ 10 ದಿನಗಳ ಕಾಲ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ ಸಂಸ್ಥೆ, ಪೆಟ್ರೋಲ್ ಬಂಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ನೋಟು ನಿಷೇಧ ಘೋಷಣೆ ಹೊರಬಿದ್ದ ಬೆನ್ನಲ್ಲೇ ಬ್ಯಾಂಕ್ ಗಳತ್ತ ಹರಿಯುತ್ತಿರುವ ಜನಸ್ತೋಮ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಗುರುನಾನಕ್ ಜಯಂತಿ ಹೊರತಾಗಿಯೂ ಕೇಂದ್ರ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಬಹುತೇಕ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಜನರು ಠೇವಣಿ ಹಾಗೂ ಹಣ ಬದಲಾವಣೆಗಾಗಿ ಬ್ಯಾಂಕ್ ಗಳ ಮುಂದೆ ಸರತಿ ಸಾಲಲ್ಲಿ ನಿಂತಿರುವುದು ಮುಂದುವರೆದಿದೆ.=