ಬೆಂಗಳೂರು: ಹೆಂಡತಿಯ ಮೇಲಿನ ಕೋಪದಿಂದ ತನ್ನ ಇಬ್ಬರು ಮಕ್ಕಳನ್ನ ತಂದೆಯೇ ಹೊಡೆದು ಕೊಂದಿರುವ ಘಟನೆ ನಗರದ ಸುಬ್ರಮಣ್ಯಪುರ ಠಾಣೆಯ ಬೀರೇಶ್ವರ ನಗರದಲ್ಲಿ ನಡೆದಿದೆ.
5 ವರ್ಷದ ಶಿವಶಂಕರ್ ಮತ್ತು 4 ವರ್ಷದ ಆದಿತ್ಯ ಮೃತ ಮಕ್ಕಳು. ಜ್ಯೋತಿಯ ಪತಿ ಸತೀಶ್ ಕುಮಾರ್ ತನ್ನ ಇಬ್ಬರು ಮತ್ತಳನ್ನ ಹೊಡೆದುಕೊಂದು ಪರಾರಿಯಾಗಿದ್ದಾನೆ.
ಬೀದರ್ ನ ಹುಮ್ನಾಬಾದ್ ನ ಸತೀಶ್, ಜ್ಯೋತಿ ಎಂಬುವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಯು ಇಬ್ಬರು ಮಕ್ಕಳ ಜತೆ ಬೀರೇಶ್ವರನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ಲಂಬರ್ ಕೆಲಸ ಮಾಡುವ ಸತೀಶ್ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ವ್ಯಯಿಸುತ್ತಿದ್ದ. ಮನೆ ಕೆಲಸ ಮಾಡುತ್ತಿದ್ದ ಜ್ಯೋತಿ ಸಂಸಾರ ನಿಬಾಯಿಸುತ್ತಿದ್ದಳು.
ಜ್ಯೋತಿ ಅವರು ಬುಧವಾರ ಬೆಳಿಗ್ಗೆ ಮಕ್ಕಳಿಬ್ಬರನ್ನು ಅಂಗನವಾಡಿಗೆ ಬಿಟ್ಟು, ಮನೆಗೆಲಸಕ್ಕೆ ತೆರಳಿದ್ದರು. ನಂತರ ಅಂಗನವಾಡಿಗೆ ತೆರಳಿದ ಆತ ಮಕ್ಕಳನ್ನ ಮನೆಗೆ ಕರೆತಂದು ಕುಡಿದ ಅಮಲಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಿದ್ದಾನೆ.
ಮಧ್ಯಾಹ್ನ ಮನೆಗೆ ಬಂದಾಗ ಜ್ಯೋತಿ ಮಕ್ಕಳನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾಳೆ. ನೆರೆಹೊರೆಯವರ ಸಹಾಯದಿಂದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.