ಬೆಳಗಾವಿ: ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಮಂಗಳವಾರ ಬೆಳಗಾವಿಯಲ್ಲಿ ನಡೆದ ಸಚಿವರು ಹಾಗೂ ರೈತ ಮುಖಂಡರ ನಡುವಿನ ಸಂಧಾನ ಸಭೆ ವಿಫಲವಾಗಿದ್ದು, ಸಭೆಯಲ್ಲೇ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ವಿರುದ್ಧ ಆಕ್ರೋಶ ಭರಿತ ರೈತರು ಘೋಷಣೆ ಕೂಗಿದ ಪ್ರಸಂಗ ಕೂಡ ನಡೆದಿದೆ.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಕ್ಕರೆ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ಹಾಗೂ ರಾಜ್ಯದ ವಿವಿಧ ರೈತ ಮುಖಂಡರ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಸಭೆಯಲ್ಲಿ ರೈತ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು. ಕಬ್ಬು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ನಿಮಿತ್ತ ಈ ಸಭೆ ನಡೆದಿದ್ದು, ರೈತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಹಿಂದೇಟು ಹಾಕಿದ ಪರಿಣಾಮ ಸಂಧಾನ ಸಭೆ ವಿಫಲವಾಗಿದೆ. ಪ್ರಮುಖವಾಗಿ ಎಸ್ ಎಪಿ ಕಾಯ್ದೆ ಪರಿಣಾಮಕಾರಿ ಜಾರಿ ಹಾಗೂ ಕಬ್ಬು ಕಟಾವು, ರವಾನೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವಂತೆ ಆಗ್ರಹಿಸಿದ್ದ ರೈತರ ಬೇಡಿಕೆಗೆ ಸರ್ಕಾರ ನಕಾರಾ ವ್ಯಕ್ತಪಡಿಸಿದೆ.
ಹೀಗಾಗಿ ಸಂಧಾನಸಭೆ ವಿಫಲವಾಗಿತ್ತು, ಸಕ್ಕರೆ ಸಚಿವ ಮಹದೇವ ಪ್ರಸಾದ್ ಅವರು ಸಕ್ಕರೆ ಕಾರ್ಖಾನೆಗಳ ಪರ ಲಾಭಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲ ರೈತರು ಅವರ ವಿರುದ್ಧ ಧಿಕ್ಕಾರ ಕೂಗಿದರು. ಅಂತೆಯೇ ಎಸ್ ಎಪಿ ಯೋಜನೆ ಜಾರಿ ಮಾಡಿದ್ದೇ ನೀವು. ಇದೀಗ ಅದರ ಹಲ್ಲು ಕಿತ್ತು ಅದು ಯಾವುದಕ್ಕೂ ಕೆಲಸಕ್ಕೆ ಬಾರದಂತೆ ಮಾಡಿದ್ದೀರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಮಹದೇವ ಪ್ರಸಾದ್ ಅವರು, ರೈತರೊಂದಿಗಿನ ಸಭೆ ವಿಫಲವಾಗಿದೆ. ರೈತರ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಆಲಿಸಿದ್ದೇವೆ. ಇದೇ ನವೆಂಬರ್ 24ರಂದು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ರೈತರ ಬೇಡಿಕೆಗಳ ಬಗ್ಗೆ ಚರ್ಚಿಸುತ್ತೇವೆ. ಸಕ್ಕರೆ ಆದಾಯದಲ್ಲಿ 70/30ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದಕ್ಕಿಂತ ಹೆಚ್ಚು ಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರ ನಿರೀಕ್ಷೆಯಂತೆಯೇ ಕ್ರಮ ಕೈಗೊಳ್ಳುತ್ತೇವೆ ಎಂದು ಮಹದೇವ ಪ್ರಸಾದ್ ಹೇಳಿದರು.