ಬೆಂಗಳೂರು: ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಚಾಲಕ ಡಾಮ್ನಿಕ್ ಪತ್ನಿ ಎಲ್ವಿನ್ ರನ್ನು ಬಂಧಿಸಿದ್ದಾರೆ.
ಚಾಲಕ ಡಾಮ್ನಿಕ್ ಪತ್ನಿ ಎಲ್ವಿನ್ ಅವರು ನಗರದ ಬಾಣಸವಾಡಿ ಮನೆಯೊಂದರಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ರಾತ್ರಿ ದಿಢೀರ್ ದಾಳಿ ಮಾಡಿ ಪತ್ನಿ ಎಲ್ವಿನ್ ರನ್ನು ಬಂಧಿಸಿದ್ದಾರೆ. ಅಂತೆಯೇ ಎಲ್ವಿನ್ ರ ಬಳಿ ಇದ್ದ ಸುಮಾರು 79.8 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದ 12 ಹಣದೊಂದಿಗೆ ಚಾಲಕ ಡಾಮ್ನಿಕ್ ಪರಾರಿಯಾಗಿದ್ದು ಆತನ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ.
ಏನಿದು ಪ್ರಕರಣ?
ಲಾಜಿಕ್ಯಾಶ್ ಎಂಬ ಸಂಸ್ಥೆ ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿದ್ದು, ಅದರಂತೆ ನಿನ್ನೆ ಕೆಜಿರಸ್ತೆಯಲ್ಲಿ ವಿವಿಧ ಬ್ಯಾಂಕುಗಳಿಗೆ ಹಣ ತುಂಬಿಸಲು ತನ್ನ ಸಿಬ್ಬಂದಿಗಳನ್ನು ಕಳುಹಿಸಿತ್ತು. ಅದರಂತೆ ಕಾರು ಚಾಲಕ ಡಾಮಿನಿಕ್ ಸೆಲ್ವರಾಜ್, ಶಿವಕುಮಾರ್, ಸಲೀಂ ಮತ್ತು ಗನ್ ಮ್ಯಾನ್ ಚಮನ್ ಲಾಲ್ ಎಂಬುವವರು ಕೆಜಿರಸ್ತೆಯಲ್ಲಿರುವ ಎಸ್ ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳಿಂದ ಸುಮಾರು 1.38 ಕೋಟಿ ಹಣ ಸಂಗ್ರಹಿಸಿದ್ದರು. ಅದರಲ್ಲಿ 1.37 ಕೋಟಿ ಹಣ ಹೊಸ 2000 ರು. ಮುಖೆಬೆಲಯದ್ದಾಗಿತ್ತು. ಉಳಿದ 1 ಲಕ್ಷ ಹಣ 100 ರು.ಮುಖಬೆಲಯದ್ದಾಗಿತ್ತು. ಬಳಿಕ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಮುಂದೆ ವಾಹನ ನಿಲ್ಲಿಸಿ ಸಿಬ್ಬಂದಿಗಳಾದ ಸಲೀಂ ಹಾಗೂ ಶಿವಕುಮಾರ್ ಎಟಿಎಂನೊಳಗೆ ಹೋಗಿ ಹಣ ತುಂಬಿಸುತ್ತಿದ್ದರು. ಈ ವೇಳೆ ಕಾರಿನ ಬಳಿ ಗನ್ ಮ್ಯಾನ್ ಚಮನ್ ಲಾಲ್ ಹಾಗೂ ಕಾರು ಚಾಲಕ ಡಾಮಿನಿಕ್ ಸೆಲ್ವರಾಜ್ ಮಾತ್ರ ಇದ್ದರು.
ಗನ್ ಮ್ಯಾನ್ ಚಮನ್ ಲಾಲ್ ಮೂತ್ರ ವಿಸರ್ಜನೆಗೆಂದು ಹೋದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಡಾಮಿನಿಕ್ ಸುಮಾರು 1.38 ಕೋಟಿ ಹಣವಿದ್ದ ವಾಹನದೊಂದಿಗೆ ಪರಾರಿಯಾಗಿದ್ದಾನೆ. ವಿಚಾರ ತಿಳಿದ ಇತರೆ ಸಿಬ್ಬಂದಿಗಳು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಲಾಜಿಕ್ಯಾಶ್ ಸಂಸ್ಥೆಯಲ್ಲಿರುವ ಚಾಲಕ ಡಾಮಿನಿಕ್ ದಾಖಲೆ ಪರಿಶೀಲಿಸಿದ ಪೊಲೀಸರು ಆತನ ಮನೆ ಲಿಂಗಾರಾಜಪುರದಲ್ಲಿರುವುದನ್ನು ಪತ್ತೆ ಮಾಡಿ ಅಲ್ಲಿಗೆ ವಿಚಾರಣೆಗಾಗಿ ತೆರಳಿದ್ದಾರೆ. ಈ ವೇಳೆ ಡಾಮಿನಿಕ್ ಮನೆಯಲ್ಲಿ ಆತನ ಪತ್ನಿ ಹಾಗೂ ಮಗಳು ಮಾತ್ರ ಇದ್ದು, ಅವರನ್ನು ವಿಚಾರಿಸಿದಾಗ ಆತ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಬಳಿಕ ಪೊಲೀಸರು ವಾಪಸಾಗಿದ್ದು, ಪೊಲೀಸರು ಹೋದ ಬಳಿಕ ಮನೆಗೆ ಬಂದ ಡಾಮಿನಿಕ್ ಆತನ ಪತ್ನಿ ಮತ್ತು ಮಗಳನ್ನು ಕರೆದೊಯ್ದಿದ್ದಾನೆ.
ಮೌಂಟ್ ಕಾರ್ಮಲ್ ಕಾಲೇಜು ಬಳಿ ಕಾರು ಪತ್ತೆ
ಇನ್ನು ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿದ್ದ ಚಾಲಕ ಡಾಮಿನಿಕ್ ನಿನ್ನೆ ತಡರಾತ್ರಿ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜು ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ವಿಚಾರ ತಿಳಿದು, ಅವರು ಪರಿಶೀಲಿಸಿದಾಗ ಅದರಲ್ಲಿ ಸುಮಾರು 45 ಲಕ್ಷ ರು.ಹಣವಿತ್ತು ಎಂದು ತಿಳಿದುಬಂದಿದೆ. ಉಳಿದ ಸುಮಾರು 92 ಲಕ್ಷ ರು.ಹಣದೊಂದಿಗೆ ಡಾಮಿನಿಕ್ ಪರಾರಿಯಾಗಿದ್ದಾನೆ. ಪ್ರಸ್ತುತ ಪರಾರಿಯಾಗಿರುವ ಚಾಲಕ ಡಾಮಿನಿಕ್ ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.