ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ ಬುಧವಾರ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ಮಹದೇವಪುರ ವಲಯದ ಬಿಬಿಎಂಪಿ ಸಹಾಯಕ ಇಂಜಿನಿಯರ್(ಎಇ) ರಾಘವೇಂದ್ರ, ಎಇಇ ಕೋದಂಡ ರೆಡ್ಡಿ ಅವರನ್ನು ಅಮಾನತುಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಇಂದು ಅದೇಶ ಹೊರಡಿಸಿದ್ದಾರೆ.
ಇಂದು ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕು ಇಬ್ಬರು ಮೃತಪಟ್ಟಿದ್ದರು. ಅಲ್ಲದೆ ಇನ್ನು ನಾಲ್ಕೈದು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯದೆ ಇದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಐದು ಅಗ್ನಿ ಶಾಮಕ ದಳದ ವಾಹನಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಈಗಗಾಲೇ ಅವಶೇಷಗಳಡಿಯಿಂದ ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, 8 ವರ್ಷದ ಓರ್ವ ಬಾಲಕ ಸೇರಿದಂತೆ ನಾಲ್ವರನ್ನು ರಕ್ಷಿಸಲಾಗಿದೆ, ಇನ್ನು ನಾಲ್ವರ ರಕ್ಷಣೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳಿದ್ದಾರೆ.
ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ನಾಲ್ಕು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳುಗಳ ಹಿಂದೆ ನೋಟಿಸ್ ಜಾರಿಗೊಳಿಸಲಾಗಿತ್ತು. ಕಟ್ಟಡ ಅನಧಿಕೃತವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಬಿಬಿಎಂಪಿ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದರೆ ಅವರ ಮೇಲೂ ಕ್ರಮ ಜರುಗಿಸುತ್ತೇವೆ ಎಂದು ಬಿಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅವರು ಹೇಳಿದ್ದಾರೆ.
2015ರ ಆಗಸ್ಟ್ 13ರಂದು ಕಟ್ಟಡ ನಿರ್ಮಾಣದ ಅನುಮತಿ ನೀಡಲಾಗಿದೆ. ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿನಯ್ ಕುಮಾರ್ ದೋಂಗಲು ಅವರು 6 ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರು.