ತುಮಕೂರು: ತನ್ನ ಇಬ್ಬರು ಹೆಣ್ಣು ಮಕ್ಕಳು ಯುವಕರನ್ನು ಪ್ರೀತಿಸುತ್ತಿದ್ದು, ಅವರು ಓಡಿ ಹೋಗುತ್ತಾರೆ ಎಂಬ ಸಂಶಯದಿಂದ ಕಳೆದ 10 ವರ್ಷಗಳಿಂದ ತಾಯಿಯೊಬ್ಬಳು ಅವರಿಬ್ಬರನ್ನು ಗಹ ಬಂಧನದಲ್ಲಿರಿಸಿದ್ಧ ಘಟನೆ ತುಮಕೂರಿನಲ್ಲಿ ನಡೆದಿದೆ.
ತಿಪಟೂರು ತಾಲೂಕಿನ ಸಾರ್ಥಹಳ್ಳಿಯ ಶಿವರಾಮಯ್ಯ ಎನ್ನುವವರ ಪತ್ನಿ ಗಂಗಮ್ಮ ಮಕ್ಕಳನ್ನು ಗೃಹ ಬಂಧನದಲ್ಲಿಟ್ಟ ಮಹಾತಾಯಿ.ಗೃಹಬಂಧನದಿಂದಾಗಿ ಓರ್ವ ಮಗಳು ಸಾವನ್ನಪ್ಪಿದ ನಂತರ ಮತ್ತೊಬ್ಬ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವರಾಮಯ್ಯ-ಗಂಗಮ್ಮ ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಸೌಭಾಗ್ಯ ಮತ್ತು ಶ್ರೀಲಕ್ಷ್ಮೀ ಎಂಬುವರು ಇಬ್ಬರು ಹೆಣ್ಣುಮಕ್ಕಳು.ಒಬ್ಬ ಗಂಡು ಮಗ ಈ ಮೊದಲೇ ಸಾವನ್ನಪ್ಪಿದ್ದ.
ಇವರಿಬ್ಬರು ಬಿಸ್ಕೆಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತಿದ್ದರು. ಈ ವೇಳೆ ಇಬ್ಬರೂ ಕೂಡಾ ಬೇರೆ ಜಾತಿಯ ಯುವಕರನ್ನು ಪ್ರೀತಿಸುತಿದ್ದರು. ಈ ವಿಚಾರ ತಾಯಿ ಗಂಗಮ್ಮಳ ಕಿವಿಗೆ ಬಿದ್ದಿತ್ತು. ಅಂದಿನಿಂದ ಇಬ್ಬರೂ ಪುತ್ರಿಯರನ್ನು ಗಂಗಮ್ಮ ಗೃಹಬಂಧನದಲ್ಲಿರಿಸಿದ್ದಾಳೆ. ಮನೆಯಿಂದ ಹೊರಗೆ ಹೋಗದಂತೆ ಸರಪಳಿಯಿಂದ ಕೈಕಾಲು ಕಟ್ಟಿ ಹಿಂಸೆ ನೀಡಿದ್ದಾಳೆ.
ತಾಯಿಯ ಈ ನಿರ್ದಯಿ ನಡೆಯಿಂದಾಗಿ ನಿಧಾನವಾಗಿ ಇಬ್ಬರೂ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಓಡಾಡದೆ ಕೈಕಾಳುಗಳು ಶಕ್ತಿ ಕಳೆದುಕೊಂಡಿವೆ. ಪರಿಣಾಮ ಕಳೆದ 20 ದಿನದ ಹಿಂದೆ ಸೌಭಾಗ್ಯ ಎಂಬ ಹಿರಿಯ ಮಗಳು ಸಾವನಪ್ಪಿದ್ದಾಳೆ. ಎರಡನೇ ಮಗಳು ಶ್ರೀಲಕ್ಷ್ಮೀ ಕೂಡಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಸದಾ ಜಗಳಗಂಟಿಯಾದ ಗಂಗಮ್ಮಳಿಂದ ಬೇಸತ್ತ ಗಂಡ ಶಿವರಾಮಯ್ಯ ಶಿಕ್ಷಕ ವೃತ್ತಿ ಬಿಟ್ಟು ಭಿಕ್ಷೆ ಬೇಡುತ್ತಿದ್ದಾ ಎಂದು ಹಲವರು ಹೇಳುತ್ತಿದ್ದಾರೆ. ಕಳೆದ 20 ವರ್ಷಗಳಿಂದ ತನ್ನ ಪತಿ ಮನೆ ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾಳೆ.
ಇಬ್ಬರು ಮಕ್ಕಳನ್ನು ಗೃಹ ಬಂಧನದಲ್ಲಿರಿಸಿದ್ದ ಗಂಗಮ್ಮ ತಮ್ಮ ಸಂಬಂಧಿಗಳು ವಾಮಾಚಾರ ಮಾಡಿಸಿದ್ದರಿಂದ ಹೆಣ್ಣು ಮಕ್ಕಳು ಈ ಸ್ಥಿತಿಗೆ ತಲುಪಿದ್ದಾರೆ, ನನ್ನ ಗಂಡು ಮಗ ಕೂಡ ವಾಮಾಚಾರಕ್ಕೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ.
ಗ್ರಾಮದಲ್ಲಿರುವ ಎಲ್ಲರ ಮೇಲೂ ಸಂಶಯ ಪಡುವ ಗಂಗಮ್ಮ ಯಾರನ್ನು ನಂಬುವುದಿಲ್ಲ, ಯಾರಾದರೂ ಸಹಾಯ ಮಾಡಲು ಬಂದರೆ ಅವರ ಜೊತೆ ಜಗಳಕ್ಕೆ ನಿಲ್ಲುತ್ತಾಳೆ, ಹೀಗಾಗಿ ಆಕೆಯ ಸಹಾಯಕ್ಕೆ ಯಾರೂ ಹೋಗುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.