ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ(ಸಂಗ್ರಹ ಚಿತ್ರ)
ಬೆಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ನಾಳೆ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ವಿಶ್ವಾಸ ಅವರದ್ದು. ಆದರೆ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲು ಹೊರಟಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪ್ರಯತ್ನವನ್ನು ಮಟ್ಟಹಾಕಲು ನಾಯಕರು ನಡೆಸಿರುವ ತಂತ್ರವಿದು ಎನ್ನುತ್ತವೆ ಮೂಲಗಳು.
2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವರಾಂ ಸೋತಿದ್ದರು. ಇದೀಗ ಅವರನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಾಳೆ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಅದ್ದೂರಿಯಾಗಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಚಲವಾದಿ ಸಮುದಾಯಕ್ಕೆ ಸೇರಿರುವ ಶಿವರಾಂ ಸ್ಯಾಂಡಲ್ ವುಡ್ ನಲ್ಲಿ ನಟರಾಗಿಯೂ ಜನರಿಗೆ ಪರಿಚಿತರು. ಐಎಎಸ್ ಅಧಿಕಾರಿಯಾಗಿದ್ದ ಶಿವರಾಂ ನಿವೃತ್ತಿ ನಂತರ ರಾಜಕೀಯಕ್ಕೆ ಸೇರಿದರು. ನಮ್ಮ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಬೇಕು ಎಂದು ಕಳೆದ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಚಿವ ಡಾ.ಜಿ.ಪರಮೇಶ್ವರ್ ಹೋರಾಡುತ್ತಿದ್ದಾಗ ಅವರ ಜೊತೆ ಶಿವರಾಂ ಸೇರಿಕೊಂಡಿದ್ದರು.
ಬಿಜೆಪಿಗೆ ಶಿವರಾಂ ಸೇರ್ಪಡೆ ರಾಜಕೀಯವಾಗಿ ಭಾರೀ ಮಹತ್ವ ಪಡೆದಿದೆ.ಪಕ್ಷದಲ್ಲಿ ಅವರ ಪಾತ್ರದ ಬಗ್ಗೆ ಭರವಸೆ ನೀಡಿಲ್ಲವಾದರೂ ಕೂಡ, ದಲಿತರು ಮತ್ತು ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಬಿಜೆಪಿಯ ಮೂಲ ನೆಲೆಯನ್ನು ವಿಸ್ತರಿಸಿ ಬಲಪಡಿಸಲು ಶಿವರಾಂ ಅವರನ್ನು ಬಳಸಿಕೊಳ್ಳಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ/ಎಸ್.ಟಿ ನಾಯಕರು ಸೇರಲು ನಾವು ನಿರೀಕ್ಷಿಸುತ್ತಿದ್ದೇವೆ. ಶಿವರಾಂ ಅವರ ಸೇವೆಯನ್ನು ದಲಿತರು, ಹಿಂದುಳಿದವರ ಸಂಘಟನೆಗೆ ಬಳಸಿಕೊಳ್ಳಲಾಗುವುದು. 2018ರ ವಿಧಾನಸಭೆ ಚುನಾವಣೆಯಲ್ಲಿ ಶಿವರಾಂ ಅವರು ದಲಿತ ಸಮುದಾಯವನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎನ್ನುತ್ತಾರೆ ಹಿರಿಯ ನಾಯಕರು.