ರಾಜ್ಯ

ಮರಣದಂಡನೆ ಶಿಕ್ಷೆಯ ಮಾರ್ಪಾಡಿಗೆ ಕೋರಿ ಉಮೇಶ್ ರೆಡ್ಡಿ ಹೈಕೋರ್ಟ್ ಮೊರೆ

Sumana Upadhyaya
ಬೆಂಗಳೂರು: ಸರಣಿ ಅತ್ಯಾಚಾರಿ, ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಬಿ.ಎ.ಉಮೇಶ್ ರೆಡ್ಡಿ, ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ತನಗೆ ವಿಧಿಸಲಾಗಿರುವ ಶಿಕ್ಷೆಯನ್ನು ಮಾರ್ಪಾಡು ಮಾಡುವಂತೆ ಕೋರಿದ್ದಾರೆ. 
ಉಮೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದ್ದು, ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ಸುಬ್ರೋ ಕಮಲ್ ಮುಖರ್ಜಿ ಮತ್ತು ಆರ್.ಬಿ.ಬುದಿಹಾಲ್ ಇಂದಿಗೆ ಮುಂದೂಡಿದರು.
ತನ್ನ ಕ್ಷಮಾದಾನ ಅರ್ಜಿ ವಿಲೇವಾರಿ ಎರಡು ವರ್ಷಗಳಷ್ಟು ತಡವಾಗಿದ್ದು ಇದರಿಂದ ತನಗೆ ಮಾನಸಿಕವಾಗಿ ತುಂಬಾ ಹಿಂಸೆಯಾಗಿ ಕಾಯಿಲೆಗೆ ತುತ್ತಾಗಿದ್ದೇನೆ. ಹಾಗಾಗಿ ತನಗೆ ವಿಧಿಸಿರುವ ಮರಣದಂಡನೆ ಶಿಕ್ಷೆಗೆ ಮಾರ್ಪಾಡು ತರಬೇಕು. ಈ ಹಿಂದೆ ಸುಪ್ರೀಂ ಕೋರ್ಟ್ ಶತ್ರುಘಾನ್ ಚೌಹಾನ್ ಮತ್ತು ಯೂನಿಯನ್ ಆಫ್ ಇಂಡಿಯಾ ಕೇಸಿನಲ್ಲಿ ಶಿಕ್ಷೆಯ ಪ್ರಮಾಣದಲ್ಲಿ ವಿನಾಯ್ತಿ ನೀಡಿತ್ತು ಎಂದು ಅರ್ಜಿಯಲ್ಲಿ ಹೇಳಿರುವ ಉಮೇಶ್ ರೆಡ್ಡಿ ತನಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾನೆ.  
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು ಅನೇಕ ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಕಡಿಮೆ ಮಾಡಿದ್ದನ್ನು ಅರ್ಜಿಯಲ್ಲಿ ರೆಡ್ಡಿ ಪರ ವಕೀಲರು ಉಲ್ಲೇಖಿಸಿದ್ದಾರೆ. 1998ರಲ್ಲಿ ಜಯಶ್ರೀ ಮರಾಡಿ ಸುಬ್ಬಯ್ಯ ಅವರ ಮೇಲೆ ಅತ್ಯಾಚಾರ ಮತ್ತು ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ದೃಢಪಡಿಸಿತ್ತು.
SCROLL FOR NEXT