ರಾಜ್ಯ

ಮೆಟ್ರೋ ಪಿಲ್ಲರ್ ಬುಡದಲ್ಲಿ ಕಾಣಿಸಿಕೊಂಡ ಹೊಗೆ: ಕೆಲ ಕಾಲ ಆಂತಕ

Manjula VN

ಬೆಂಗಳೂರು: ವಿಜಯನಗರದ ಹೊಸಹಳ್ಳಿ ಮೆಟ್ರೋನಿಲ್ದಾಣದ ಪಿಲ್ಲರ್ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಕೆಲಕಾಲ ಆತಂಕದ ವಾತಾರವಣ ನಿರ್ಮಾಣವಾಗಿತ್ತು.

ಮಳೆ ನೀರು ಕೆಳಗೆ ಹರಿದು ಹೋಗುವ ಸಲುವಾಗಿ ಪಿಲ್ಲರ್ ನಲ್ಲಿ ನಿರ್ಮಿಸಲಾಗಿರುವ ಕಿಂಡಿಗಳಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಜನರು ಮೆಟ್ರೋ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ನಂತರ ಅಧಿಕಾರಿಗಳು ಅಗ್ನಿ ಶಾಮಕ ದಳ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪರಿಶೀಲನೆ ನಡೆಸಿದಾಗ ಕೇವಲ ಹೊಗೆ ಬರುತ್ತಿರುವುದು ಕಂಡುಬಂದಿದೆ. ನಂತರ ಅದನ್ನು ನಂದಿಸಿದ್ದಾರೆ.

ಮೆಟ್ರೋ ಮಾರ್ಗದಲ್ಲಿರುವ ಪಿಲ್ಲರ್ ಗಳ ಬಳಿ ಬೀದಿ ವ್ಯಾಪಾರಿಗಳು ಹಾಗೂ ಕೆಲ ಅಲೆಮಾರಿಗಳು ಅಡುಗೆ ತಯಾರಿಗಾಗಿ ಬೆಂಕಿ ಹಾಕಿದ್ದಾರೆ. ಬೆಂಕಿಯ ಮೇಲೆ ಕೆಲ ಬಟ್ಟೆಗಳನ್ನು ಹಾಕಿದ್ದಾರೆ. ಇದರ ಪರಿಣಾಮ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿದೆ. ಮಳೆ ನೀರು ಕೊಯ್ಲುಗಾಗಿ ಪಿಲ್ಲರ್ ಗಳ ಬಳಿ ಪ್ಲಾಸ್ಟಿಕ್ ಪೈಪ್ ಗಳನ್ನು ಅಳವಡಿಸಲಾಗಿತ್ತು. ಬೆಂಕಿ ಹಚ್ಚಿದ್ದ ಪರಿಣಾಮ ಪೈಪುಗಳು ಬೆಂಕಿಗೆ ಆಹುತಿಯಾಗಿವೆ. ಪರಿಣಾಮ ಮೆಟ್ರೋ ಹಳಿಗಳಲ್ಲಿ ಹೊಗೆ ಕಾಣಿಸಿಕೊಂಡಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕೆಲ ಅಲೆಮಾರಿಗಳು ಅಡುಗೆ ಮಾಡಲು ಬೆಂಕಿ ಹಚ್ಚಿದ್ದರಿಂದ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಅಕ್ಕಿ ಹಾಗೂ ತರಕಾರಿಗಳು ಸಿಕ್ಕಿವೆ ಎಂದು ವಿಜಯನಗರ ಪೊಲೀಸರು ಮಾಹಿತಿ ಹೇಳಿದ್ದಾರೆ.

ಸ್ಥಳದಲ್ಲಿ ಗಸ್ತು ತಿರುಗುವ ಪೊಲೀಸರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಪ್ರಮುಖವಾಗಿ ಮೆಟ್ರೋ ಪಿಲ್ಲರ್ ಗಳ ಬಳಿ ಹೆಚ್ಚಿಸಲಾಗುತ್ತದೆ. ಮೆಟ್ರೋ ನಿಲ್ದಾಣದ ಬಳಿ ಇರುವ ಜನರು ಈ ರೀತಿಯ ಕೆಲಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

SCROLL FOR NEXT