ರಾಜ್ಯ

ಆನೆ ಸಿದ್ದನ ಆರೋಗ್ಯದಲ್ಲಿ ಚೇತರಿಕೆ!

Srinivasamurthy VN

ರಾಮನಗರ: ಮುಂಬದಿಯ ಬಲಗಾಲು ಮುರಿದುಕೊಂಡು ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಾಡಾನೆ ಸಿದ್ಧನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು  ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರ ಡ್ಯಾಂ ಬಳಿ ಇರುವ ರಾಗಿ ಹೊಲದಲ್ಲಿ ಆನೆ ಸಿದ್ಧನಿಗೆ ಚಿಕಿತ್ಸೆ ಮುಂದವೆರಸಲಾಗುತ್ತಿದ್ದು, ಇಂದು ಬೆಳಗ್ಗೆ ಆನೆ ಸಿದ್ಧನ  ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಾತ್ರಿ ಜೋಳ, ನೀರು ಸೇವಿಸಿದ್ದ ಸಿದ್ಧ ಇಂದು ಬೆಳಗ್ಗೆಯಿಂದ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾನೆ ಎಂದು ಆನೆಗೆ  ಚಿಕಿತ್ಸೆ ನೀಡುತ್ತಿರುವ ವೈದ್ಯ ಸಂಜಯ್ ಅವರು ಹೇಳಿದ್ದಾರೆ.

ಕಾಲು ಮುರಿದ ಕಾರಣ ಉಂಟಾಗಿದ್ದ ಕೀವನ್ನು ವೈದ್ಯರು ಹೊರತೆಗೆದಿದ್ದು, ಆ ಭಾಗಕ್ಕೆ ವೈದ್ಯರು ಸೂಕ್ತ ಔಷಧಿ ಸಿಂಪಡಿಸಿದ್ದಾರೆ. ಅಂತೆಯೇ ಮುರಿದ ಕಾಲಿಗೆ ಬೆಲ್ಟ್ ಹಾಕಲಾಗಿದ್ದು, ನೋವು ನಿವಾರಣೆಗೆ ಔಷಧಿ ಮುಂದುವರೆಸಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಗೋಪಾಲನಗರ ಬಳಿ ಕಳೆದ ಆಗಸ್ಟ್‌ 30ರಂದು ಆನೆ ಸಿದ್ಧ ಕಾಲುವೆ ದಾಟುವಾಗ ಕಾಲುಜಾರಿ ಬಿದ್ದು ಕಾಲು ಮುರಿದುಕೊಂಡಿತ್ತು. ರಸ್ತೆ  ದಾಟುವ ಅವರಸರದಲ್ಲಿ ಆನೆ ಕಾಲುವೆಗೆ ಜಾರಿತ್ತು. ಕಾಲು ಮುರಿದ ಆನೆಯನ್ನು ಹಾಗೆಯೇ ಕಾಡಿಗೆ ಅಟ್ಟಲಾಗಿತ್ತಾದರೂ ಕಾಲುನೋವಿನಿಂದ ಆನೆ ಮತ್ತೆ ಆಹಾರ ಮತ್ತು ನೀರನ್ನು ಅರಸಿ ಸಮೀಪದ  ಹಳ್ಳಿಗಳ್ಳಲ್ಲಿ ಕಾಣಿಸಿಕೊಳ್ಳ ತೊಡಗಿತ್ತು. ಆನೆಯ ಹೃದಯವಿದ್ರಾವಕ ಪರಿಸ್ಥಿತಿ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸುದ್ದಿ ಮುಟ್ಟಿಸಿದ್ದಾರೆ.

ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರ ಡ್ಯಾಂ ಬಳಿ ಬಿದ್ದಿದ್ದ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆರಂಭದಲ್ಲಿ ಮೈಸೂರಿನಿಂದ ವೈದ್ಯರನ್ನು  ಕರೆಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಕೇರಳ ಮತ್ತು ಅಸ್ಸಾಂ ನಿಂದ ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಈ ಇಬ್ಬರು ವೈದ್ಯರ ನೇತೃತ್ವದಲ್ಲಿ  ಬನ್ನೇರುಘಟ್ಟದ ವೈದ್ಯಾಧಿಕಾರಿ ಸಂಜಯ್ ಅವರು ಆನೆಗೆ ಚಿಕಿತ್ಸೆ ಮುಂದುವರೆಸಿದ್ದಾರೆ.

SCROLL FOR NEXT