ರಾಜ್ಯ

ನಗರದಲ್ಲಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ ಹನುಮನ ಚಿತ್ರ!

Srinivasamurthy VN

ಬೆಂಗಳೂರು: ಬೈಕ್, ಕಾರು, ಆಟೋಗಳ ಮೇಲೆ ಚಿತ್ರಗಳನ್ನು ಅಂಟಿಸುವುದು ಸಾಮಾನ್ಯ.. ಆದರೆ ಇತ್ತೀಚೆಗೆ ದೇವರ ಚಿತ್ರವೊಂದು ಸದ್ದಿಲ್ಲದೇ ಸುದ್ದಿ ಮಾಡುತ್ತಿದ್ದು, ವಾಹನಗಳ ಮೇಲಿನ  ಸ್ಟಿಕ್ಕರ್ ವಿಚಾರದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡಿದೆ.

ಅರ್ಧ ಮುಖಾಕೃತಿಯ ರೌದ್ರಾವತಾರದ ಹನುಮಾನ್ ಚಿತ್ರವನ್ನು ಕೇಸರಿ ಮತ್ತು ಕಪ್ಪು ಬಣ್ಣ ಮಿಶ್ರಿತ ರೇಡಿಯಂ ಸ್ಟಿಕ್ಕರ್ ನಲ್ಲಿ ಚಿತ್ರಿಸಲಾಗಿದ್ದು, ಇವುಗಳನ್ನು ವಾಹನ ಗಾಜಿನ ಮೇಲೆ  ಅಂಟಿಸಿದಾಗ ಸೂಪರ್ ಲುಕ್ ಬರುತ್ತದೆ. ಇದೇ ಕಾರಣಕ್ಕೆ ವಾಹನಗಳ ಮಾಲೀಕರು ತಮ್ಮ ಕಾರಿನ ಮೇಲೆ ವಿವಿಧ ಬಣ್ಣ ಹಾಗೂ ವಿವಿಧ ಗಾತ್ರದಲ್ಲಿ ಈ ಸ್ಟಿಕ್ಕರ್ ಗಳನ್ನು ಅಂಟಿಸಲು  ಮುಂದಾಗಿದ್ದಾರೆ. ಇತ್ತೀಚಿನ ದಿನಗಳ ಈ ಸ್ಟಿಕ್ಕರ್ ಗೆ ಬೇಡಿಕೆ ಹೆಚ್ಚಿದ್ದು, ಇದೀಗ ಈ ಚಿತ್ರ ನಗರದಲ್ಲಿ ಹೊಸ ಟ್ರೆಂಡ್ ಆಗಿ ಬದಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಆಟೋ, ಲಾರಿ, ಬೈಕ್, ಬಸ್, ಟೆಂಪೋ ಟ್ರಾವೆಲರ್ ಗಳ ಮೇಲೆ ಕಳೆದ ಒಂದೆರಡು ತಿಂಗಳಿನಿಂದ ಕೇಸರಿ ಬಣ್ಣದ  ಹನುಮಾನ್ ಮುಖದ ಸ್ಟಿಕ್ಕರ್ ರಾರಾಜಿಸುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಕರಾವಳಿ, ಮಲೆನಾಡು, ಬಯಲಸೀಮೆಯ ವಾಹನ ಸವಾರರೂ ಸಹ ಈ ಸ್ಟಿಕ್ಕರ್ ಹಾಕಿಸಿಕೊಳ್ಳಲು  ಮುಗಿಬಿದಿದ್ದಾರೆ.

ಕೇವಲ ವಾಹನಗಳ ಮೇಲೆ ಮಾತ್ರವಲ್ಲದೇ ಕಂಪ್ಯೂಟರ್ ಗಳ ವಾಲ್ ಪೇಪರ್ ಆಗಿ, ಫೇಸ್ ಬುಕ್ ಕವರ್ ಫೋಟೋ ಹಾಗೂ ವಾಟ್ಸಪ್ ನಲ್ಲಿಯೂ ಕೂಡ ಈ ಚಿತ್ರದ ಬಳಕೆ ಹೆಚ್ಚುತ್ತಿದೆ.

ಆಂಜನೇಯನ ಈ ರೌದ್ರಾವತಾರದ ಮುಖ ಧೈರ್ಯದ ಪ್ರತೀಕವಾಗಿದ್ದು, ಇದೇ ಕಾರಣಕ್ಕೆ ಯುವಕರು ಈ ಸ್ಟಿಕ್ಕರ್ ಗಳನ್ನು ತಮ್ಮ ತಮ್ಮ ವಾಹನಗಳ ಮೇಲೆ ಹಾಕಿಸಲು ಮುಂದಾಗಿದ್ದಾರೆ. ಇನ್ನು  ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸ್ಟಿಕ್ಕರ್ ಅಂಗಡಿ ಮಾಲೀಕರು, ಇತ್ತೀಚಿನ ದಿನಗಳಲ್ಲಿ ಈ ಸ್ಟಿಕ್ಕರ್ ಗೆ ಬೇಡಿಕೆ ಹೆಚ್ಚಾಗಿದೆ. ವಾಹನದ ಬಣ್ಣ ಮತ್ತು ಗಾತ್ರಕ್ಕೆ ಅನುಗುಣವಾಗಿ  ಸ್ಟಿಕ್ಕರ್ ಗಳನ್ನು ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು 5 ಇಂಚು ಗಾತ್ರದ ಸ್ಟಿಕ್ಕರ್ ಗೆ ಕನಿಷ್ಠ 60 ರು.ದರವನ್ನು ಸ್ಟಿಕ್ಕರ್ ಅಂಗಡಿ ಮಾಲೀಕರು ನಿಗದಿ ಪಡಿಸಿದ್ದಾರೆ. ಈ ದರ ಸ್ಟಿಕ್ಕರ್ ನ ಗಾತ್ರ  ಹಾಗೂ ಬಣ್ಣದ ಆಧಾರದ ಮೇಲೆ ಬದಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಹಿಂದೂಪರ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು, ಭಜರಂಗ ದಳದ ಕಾರ್ಯಕರ್ತರು ಈ ಸ್ಟಿಕ್ಕರ್ ಗಳನ್ನು ತಮ್ಮ ತಮ್ಮ ವಾಹನಗಳ ಮೇಲೆ ಹಾಕಿಸಿದ್ದರು. ದಿನಕಳೆದಂತೆ  ಈ ಸ್ಟಿಕ್ಕರ್ ನಗರದಲ್ಲಿ ಯುವಕರ ಗಮನ ಸೆಳೆದಿದ್ದು, ಎಲ್ಲ ವರ್ಗದ ಜನರಲ್ಲಿ, ಅದರಲ್ಲೂ ಯುವಕರಲ್ಲಿ ಕ್ರೇಜ್ ಆಗಿ ಪರಿವರ್ತಿತವಾಗಿದೆ.

SCROLL FOR NEXT